ಮುಖ್ಯವಾಹಿನಿಗೆ ಬರಲು ಮಹಿಳೆಗೆ ಇರುವ ಅಡತಡೆಗಳೇನು?

ಅನಾದಿ ಕಾಲದಿಂದಲೂ ಮಹಿಳೆಯನ್ನು ದ್ವಿತೀಯ ದಜೆ೯ ನಾಗರಿಕರಂತೆ ನೋಡಲಾಗಿದೆ. ಆಧುನಿಕ ಯುಗದಲ್ಲಿ ಮಹಿಳೆಗೆ ಸಮಾನವಾದ ಸ್ಥಾನ ಮಾನ ನೀಡಿರುವೆವು ಎಂದು ನಾವು ಅಂದುಕೊಂಡರೂ ಇನ್ನೂ ನಮ್ಮ ಸಮಾಜದಲ್ಲಿ ಹೆಚ್ಚಿನ ಜನರು ಮಹಿಳೆಯನ್ನು ಗೌರವಯುತವಾಗಿ ನೋಡುತ್ತಿಲ್ಲ. ''
ಇದರ ಹಿಂದಿರುವ ಕಾರಣಗಳೇನು? ತೊಡಕುಗಳೇನು? ವಿಶ್ವ ಮಹಿಳಾ ದಿನ ಒಂದು ಟೊಳ್ಳು ಆಚರಣೆಯಾಗದಿರಲಿ ಎಂಬ ಆಶಯದಿಂದ ಇವುಗಳನ್ನು ಒಂದೊಂದಾಗಿ ಗುರುತಿಸಿದ್ದಾರೆ

*** ವಿವೇಕ ಬೆಟ್ಕುಳಿ ***

ವಿಶ್ವ ಮಹಿಳಾ ದಿನಾಚರಣೆಯನ್ನು ನಾವೆಲ್ಲರೂ ಪ್ರತಿ ವರ್ಷ ಮಾರ್ಚ 8 ರಂದು ಆಚರಿಸುವೆವು. ಈ ಸಂದರ್ಭದಲ್ಲಿ ಮಹಿಳೆಯ ಸಾಧನೆ ಮತ್ತು ಮುಂದೆ ಸಾಗಬೇಕಾದ ದಾರಿಗಳ ಬಗ್ಗೆ ಚಚೆ೯ ನಡೆಯುವುದು ಇದಲ್ಲದೇ ಮಹಿಳೆಯರಿಗೆ ಸಂಬಂಧಸಿದಂತೆ ವಿವಿಧ ರೀತಿಯ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಬೇರೆ ಬೇರೆ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಮಹಿಳೆಯರನ್ನು ನಾವು ನೆನಸಿಕೊಳ್ಳುವ ಕಾರ್ಯಕ್ರಮ ಸಹಾ ನಡೆಯುವುದು. ಪುರುಷ ಪ್ರಧಾನವಾದ ನಮ್ಮ ಸಮಾಜದಲ್ಲಿ ಅನಾದಿ ಕಾಲದಿಂದಲೂ ಮಹಿಳೆಯನ್ನು ದ್ವಿತೀಯ ದಜೆ೯ ನಾಗರಿಕರಂತೆ ನೋಡಲಾಗಿದೆ. ಆಧುನಿಕ ಯುಗದಲ್ಲಿ ಮಹಿಳೆಗೆ ಸಮಾನವಾದ ಸ್ಥಾನ ಮಾನ ನೀಡಿರುವೆವು ಎಂದು ನಾವು ಅಂದುಕೊಂಡರೂ ಇನ್ನೂ ನಮ್ಮ ಸಮಾಜದಲ್ಲಿ ಹೆಚ್ಚಿನ ಜನರು ಮಹಿಳೆಯನ್ನು ಗೌರವಯುತವಾಗಿ ನೋಡುತ್ತಿಲ್ಲ ಎಂಬುದನ್ನು ಗಮನಿಸಬಹುದಾಗಿದೆ. ನಮ್ಮ ವ್ಯವಸ್ಥೆಯಲ್ಲಿ ಮಹಿಳೆ ಇನ್ನೂ ಸಹ ಮುಖ್ಯವಾಹಿನಿಯಲ್ಲಿ ಬರದೇ ಇರಲು ಹಲವಾರು ಕಾರಣಗಳಿವೆ. ಅವುಗಳಲ್ಲಿ ಕೆಲವೊಂದು ಅಂಶಗಳನ್ನು ಈ ಕೆಳಕಂಡಂತೆ ಗುರುತಿಸಬಹುದಾಗಿದೆ.

ಮಹಿಳೆ ಇಂದಿಗೂ ಅಡುಗೆ ಮನೆಯಲ್ಲಿ ಬಂಧಿ

ನಮ್ಮ ಸಮಾಜ ಅನಾದಿ ಕಾಲದಿಂದ ಮಹಿಳೆಯನ್ನು ಅಡುಗೆ ಮನೆಯ ಯಜಮಾನಿಯನ್ನಾಗಿ ಗುರುತಿರುವುದು. ಹೆಣ್ಣು ಮಗು ಜನನವಾಗಿ, ಅವಳು ದೊಡ್ಡವಳಾದಂತೆ ಅಡುಗೆ ಮನೆಯ ಕೆಲಸ ತನ್ನ ಕಡ್ಡಾಯ ಹಕ್ಕು ಎಂಬಂತೆ ತಿಳಿದು ಕಾರ್ಯನಿರ್ವಹಿಸಲು ಪ್ರಾರಂಭಿಸುವಳು. ಬಡತನ, ಮಧ್ಯಮ, ಮತ್ತು ಶ್ರೀಮಂತ ವರ್ಗ ಈ ಮೂರು ರೀತಿಯ ಕುಟುಂಬಗಳ ಮಹಿಳೆಯರ ಸ್ಥಿತಿ ಒಂದೇ ತೆರನಾಗಿರುವುದು. ಬಡತನದಲ್ಲಿರುವ ಕುಟುಂಬದಲ್ಲಿ ಮಹಿಳೆ ದೈಹಿಕವಾದ ಕೆಲಸವನ್ನು ಗಂಡಸಿನೊಂದಿಗೆ ಸಮಾನವಾಗಿ ನಿರ್ವಹಿಸಿ ಜೊತೆಗೆ ಮನೆಗೆ ಬಂದು ಅಡುಗೆ ಮಕ್ಕಳ ಸಂಪೂರ್ಣ ಜವಬ್ದಾರಿಯನ್ನು ತೆಗೆದುಕೊಳ್ಳಬೇಕಾಗಿದೆ. ಮಧ್ಯಮ ವರ್ಗದಲ್ಲಿರುವ ಮಹಿಳೆ ಮನೆಯಿಂದ ಹೊರಗೆ ಹೋಗಿ ವಿವಿಧ ಕ್ಷೇತ್ರದಲ್ಲಿ ಪುರುಷರಿಗೆ ಸಮಾನವಾಗಿ ಕಾರ್ಯನಿರ್ವಹಿಸಿ ಮನೆಗೆ ಬಂದು ಅಡುಗೆ ಮನೆಯ ಜವಬ್ದಾರಿಯನ್ನು ನಿಭಾಯಿಸಬೇಕಾಗಿದೆ. ಶ್ರೀಮಂತ ವರ್ಗದಲ್ಲಿ ಮಹಿಳೆಗೆ ಕೆಲವು ಸ್ವಾತಂತ್ಯ ಇದ್ದರೂ ಸಹ ಅವರು ಅಡುಗೆ ಮನೆಯ ಯಜಮಾನಿಯ ಕಾರ್ಯವನ್ನೇ ನಿಭಾಯಿಸಬೇಕಾಗಿರುವುದು. ಎಷ್ಟೋ ಐಎಎಸ್ ಹಂತದ ಮಹಿಳಾ ಅಧಿಕಾರಿಗಳು ತಮ್ಮ ವೃತ್ತಿ ಕ್ಷೇತ್ರದಲ್ಲಿ ಜಿಲ್ಲೆಯನ್ನು ಒದೊಂದು ಇಲಾಖೆಯನ್ನು ನಿಭಾಯಿಸುವರು; ಅವರೇ ಮನೆಗೆ ಬಂದು ಅಡುಗೆ ಮಾಡಿ ಗಂಡ ಮಕ್ಕಳಿಗೆ ಬಡಿಸುವುದನ್ನು ಇಂದಿಗೂ ಕಾಣಬಹುದಾಗಿದೆ. ಒಟ್ಟಾರೆ ಮಹಿಳೆಯನ್ನು ಅಡುಗೆ ಮನೆಯ ಯಜಮಾನಿಯನ್ನಾಗಿ ಬಿಂಬಿಸಿ ಬಂಧಿಸಿಡುವ ಕಾರ್ಯ ವಿವಿಧ ಹಂತಗಳಲ್ಲಿ ವಿಭಿನ್ನ ಬಗೆಯಲ್ಲಿ ಮುಂದುವರೆಯುತ್ತ ಇರುವುದನ್ನು ಕಾಣಬಹುದಾಗಿದೆ. 

ಸಂಪ್ರದಾಯ ಸಂಸ್ಕೃತಿ ರಕ್ಷಣೆಯ ಹೆಸರಿನಲ್ಲಿ ಮಹಿಳೆ ಬಂಧಿ

ನಮ್ಮ ಸಮಾಜ ಸಂಪ್ರದಾಯವನ್ನು ರಕ್ಷಣೆ ಮಾಡುವ ಗುತ್ತಿಗೆಯನ್ನು ಸಹಾ ಮಹಿಳೆಯರಿಗೆ ಒದಗಿಸಿದಂತೆ ವತಿ೯ಸುವುದು. ನಮ್ಮ ದೇಶದಲ್ಲಿನ ನೂರಾರು ಜಾತಿ ಜನಾಂಗದಲ್ಲಿ ಹಿಂದಿನಿಂದ ನಡೆದು ಬಂದಿರುವ ಸಂಪ್ರದಾಯವನ್ನು ಮುಂದಿನ ಪೀಳಿಗೆಗೆ ವಗಾ೯ಯಿಸುವ ಕಾರ್ಯ ಮಹಿಳೆ ಮೇಲೆ ಇರುವುದು. ಆಹಾರ ಪದ್ದತಿ ಇರಬಹುದು, ವೇಷ ಭೂಷಣ ಇರಬಹುದು, ಎಲ್ಲ ಕಡೆ ಮಹಿಳೆಯೆ ಪ್ರಮುಖವಾಗಿರುವುದು. ಮದುವೆಯಾದ ಮಹಿಳೆ ಸಿಂಧೂರ, ಕಾಲುಂಗುರ, ಮಾಂಗಲ್ಯ ಇವನ್ನೆಲ್ಲre ಧರಿಸಬೇಕು ಎಂಬ ಅಲಿಖಿತ ಕಾನೂನು ಇರುವುದು. ಆದರೆ ಅದೇ ಪುರುಷನಿಗೆ ಇಂತಹ ಯಾವುದೇ ಕಟ್ಟುಪಾಡಿನ ಜಂಜಾಟ ಇರುವುದಿಲ್ಲ. ಈ ರೀತಿಯ ಮಹಿಳೆಗೆ ಮಾತ್ರ ಸೀಮಿತವಾಗಿರುವ ಸಂಪ್ರದಾಯಗಳು ಎಲ್ಲ ಧರ್ಮಗಳಲ್ಲಿಯೂ ವಿಭಿನ್ನ ರೀತಿಯಲ್ಲಿರುವುದನ್ನು ಕಾಣಬಹುದಾಗಿದೆ. ಶಿಕ್ಷಣ ಪಡೆದ ಮಹಿಳೆಯರು ಈ ರೀತಿಯ ಸಂಪ್ರದಾಯದಿಂದ ಹೊರಬರಲು ಪ್ರಯತ್ನ ಪಟ್ಟರೂ ಸಹ ಎಲ್ಲಾ ಭಾಗದಲ್ಲಿ ಅದು ಸಾಧ್ಯವಾಗುತ್ತಿಲ್ಲ. ಒಟ್ಟಾರೆ, ಮಹಿಳೆ ಸಂಪ್ರದಾಯ ಸಂಸ್ಕೃತಿಯ ಹೆಸರಿನಲ್ಲಿ ಬಂಧಿಯಾಗಿರುವಳು.

ಅವಕಾಶದಿಂದ ವಂಚಿತವಾಗಿರುವ ರಾಜಕೀಯ ಸ್ಥಾನ ಮಾನ 

ಪುರುಷ ಪ್ರಧಾನ ಸಾಮಾಜಿಕ ವ್ಯವಸ್ಥೆಯಲ್ಲಿ ಅನಾದಿಕಾಲದಿಂದಲ್ಲೂ ಮಹಿಳೆಯನ್ನು ಹೀನಾಯವಾಗಿ ನಡೆಸಿಕೊಳ್ಳಲಾಗಿದೆ. ಹಿಂದೆ ಒಂದು ಕಾಲದಲ್ಲಿ ಮಹಿಳೆಗೆ ಮತದಾನದ ಹಕ್ಕು ಇರಲಿಲ್ಲ. ಅದೇ ಮುಂದುವರೆದ ಭಾಗವೇ ಇಂದಿನ ರಾಜಕೀಯ ವ್ಯವಸ್ಥೆ. ಮೀಸಲಾತಿ ಇರುವ ಕಾರಣಕ್ಕಾಗಿ ಮಹಿಳೆಯರು ಇಂದು ಕೆಲವು ಹಂತದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿರುವರು. ಮೀಸಲಾತಿ ಇಲ್ಲದ ಲೋಕ ಸಭೆ ಮತ್ತು ವಿಧಾನ ಸಭೆಗಳಲ್ಲಿ ಇಂದಿಗೂ ಪುರುಷರಿಗೆ ಹೋಲಿಸಿದರೆ ಮಹಿಳಾ ಪ್ರತಿನಿಧಿಗಳ ಸಂಖ್ಯೆ ಬೆರಳಣಿಕೆಯಷ್ಟು ಮಾತ್ರ. ಜನಸಂಖ್ಯೆಯಲ್ಲಿ ಅರ್ಧದಷ್ಟು ಇರುವ ಮಹಿಳೆಯರು ರಾಜಕೀಯದ ಎಲ್ಲಾ ಕ್ಷೇತ್ರಗಳಲ್ಲಿ ಅರ್ಧದಷ್ಟು ಇರಬೇಕಾದ ಅಗತ್ಯ ಇದೆ. ಅಂದಾಗ ಮಾತ್ರ ರಾಜಕೀಯ ಸಮಾನತೆ ಬರುವುದು. ಪುರುಷರ ಕಪಿಮುಷ್ಠಿಯಲ್ಲಿ ಸಿಲುಕಿರುವ ರಾಜಕೀಯ ಕ್ಷೇತ್ರ ಅಷ್ಟು ಸುಲಭವಾಗಿ ಮಹಿಳೆಯರಿಗೆ ಅವಕಾಶವನ್ನು ನೀಡುತ್ತಿಲ್ಲ. ನಮ್ಮ ದೇಶದಲ್ಲಿ ಆಗಿ ಹೋದ ಒಂದೇ ಒಂದು ಮಹಿಳಾ ಪ್ರಧಾನಿ ಮಾಡಿದ ಕಾರ್ಯವನ್ನು ಯಾವ ಪುರುಷ ಪ್ರಧಾನಿಯೂ ಮಾಡಿರುವುದಿಲ್ಲ. ಅಂದರೆ ಸಾಕಷ್ಟು ಅರ್ಹತೆ ಮಹಿಳೆಯರಿಗೆ ಇರುವುದು. ರಾಜಕೀಯ ಸ್ಥಾನ ಮಾನ ಸಮಾನವಾಗಿ ಸಿಕ್ಕರೆ ಉತ್ತಮ ಆಡಳಿತವನ್ನು ನಿರೀಕ್ಷೆ ಮಾಡಬಹುದು. ಆದರೆ ಅದಕ್ಕೆ ಅವಕಾಶವನ್ನು ನಮ್ಮ ವ್ಯವಸ್ಥೆ ಒದಗಿಸುತ್ತಿಲ್ಲ.

ಮಕ್ಕಳನ್ನು ಸಾಕುವ ಭಾವನಾತ್ಮಕ ಕೆಲಸದಲ್ಲಿ ಬಂಧಿ

ನಮ್ಮ ಸಮಾಜದಲ್ಲಿ ಮಗುವನ್ನು ಸಾಕುವ ಜವಬ್ದಾರಿ ಕೇವಲ ಮಹಿಳೆಯದ್ದೆ ಆಗಿರುವುದು. ನೈಸಗಿ೯ಕವಾಗಿ ಕೆಲವೊಂದು ಅಂಶಗಳಲ್ಲಿ ಮಗುವಿನ ಪಾಲನೆಯಲ್ಲಿ ಮಹಿಳೆಯ ಪಾತ್ರ ಮುಖ್ಯವಾಗಿರುವುದು. ಮಗುವಿನ ಸ್ನಾನ, ಶೌಚ ಇವೆಲ್ಲವೂ ಕಡ್ಡಾಯವಾಗಿ ಮಹಿಳೆಯೇ ಮಾಡಿಸಬೇಕು ಎಂಬ ವಾತಾವರಣ ಎಲ್ಲಾ ವರ್ಗದ ಮನೆಯಲ್ಲಿ ಇರುವುದನ್ನು ಕಾಣಬಹುದಾಗಿದೆ. ಯಾವ ಪುರುಷನೂ ಸಹಜವಾಗಿ ಮಗುವಿನ ಆರೈಕೆ ಪೂರೈಕೆಯಲ್ಲಿ ತೊಡಗಿರುವುದನ್ನು ಕಾಣುವುದಿಲ್ಲ. ಪರಿಸ್ಥಿತಿಯ ಕಾರಣದಿಂದ ಅನಿವಾರ್ಯವಾಗಿ ಮಗುವಿನ ಆರೈಕೆಯಲ್ಲಿ ತೊಡಗಿರಬಹುದು. ಆದರೆ ತಾಯಿ-ಮಗು ಎಂಬ ಭಾವನಾತ್ಮಕವಾದ ಸಂಬಂಧದಿಂದ ಮಕ್ಕಳನ್ನು ಸಾಕಿ ಸಲಹುವ ಎಲ್ಲಾ ಜವಾಬ್ದಾರಿಯನ್ನು ಪುರುಷ ಪ್ರಧಾನ ಸಮಾಜ ಮಹಿಳೆಯ ಹೆಗಲಿಗೆ ಹಾಕಿ ಅವಳನ್ನು ಬಂಧಿಯಾಗಿರಿಸಿರುವುದು.

ಕನಸಾಗಿಯೇ ಇರುವ ಆಥಿ೯ಕ ಸ್ವಾತಂತ್ಯ

ಇಂದಿನ ಆಧುನಿಕ ಸಮಾಜದಲ್ಲಿ ಮಹಿಳೆ ಪುರುಷನಿಗೆ ಸಮಾನವಾಗಿ ಎಲ್ಲ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತ ಇರುವಳು. ಸ್ವಂತವಾಗಿ ಸಂಪಾದನೆಯನ್ನು ಮಾಡುತ್ತಿರುವಳು. ಆದರೆ ಇಂದಿಗೂ ಹೆಚ್ಚಿನ ಮನೆಗಳಲ್ಲಿ ಎಷ್ಟೇ ಸಂಪಾದನೆ ಮಾಡಿದರೂ ಆಕೆಗೆ ಆಥಿ೯ಕ ಸ್ವಾತಂತ್ರ್ಯ ಎಂಬುದು ಕನಸಾಗಿಯೇ ಇರುವುದು. ತಾನು ದುಡಿದ ಹಣವನ್ನು ತನಗೆ ಇಷ್ಟದಂತೆ ಖಚು೯ ಮಾಡುವುದು ಸಹ ಸಾಧ್ಯವಾಗುತ್ತಿಲ್ಲ. ಪ್ರತಿಯೊಂದಕ್ಕೂ ಗಂಡ, ಅಪ್ಪ, ಮಗ ಹೀಗೆ ಇವರುಗಳನ್ನು ಕೇಳಿ ಖಚು೯ ಮಾಡುವ ಸ್ಥಿತಿ ಇರುವುದು. ತನಗೆ ಸಾಕಷ್ಟು ಆಸೆ ಆಕಾಂಕ್ಷೆಗಳು ಇದ್ದರೂ ಆಥಿ೯ಕ ಸ್ವಾತಂತ್ರ್ಯ ಇಲ್ಲದ ಕಾರಣಕ್ಕಾಗಿ ಕೊರಗುತ್ತಿರುವುದನ್ನು ಗಮನಿಸಬಹುದಾಗಿದೆ. ಬಡ, ಮದ್ಯಮ, ಶ್ರೀಮಂತ ಎಲ್ಲ ವರ್ಗಗಳಲ್ಲಿ ಈ ಸಮಸ್ಯೆ ಇದ್ದರೂ ಹೆಚ್ಚಾಗಿ ಮಧ್ಯಮ ವರ್ಗದ ಮಹಿಳೆ ಆಥಿ೯ಕ ಸ್ವಾತಂತ್ರ್ಯದಿಂದ ವಂಚಿತವಾಗಿರುವಳು.

ಮನೆಯ ಗೌರವದ ಹೆಸರಿನಲ್ಲಿ ಸ್ವಾಂತ್ಯಂತ್ರದ ಹರಣ

ಯುವತಿ ಮದುವೆಗೂ ಮುಂಚೆ ತಾನು ಹುಟ್ಟಿದ ಮನೆಯ ಗೌರವ ಕಾಪಾಡುವುದಕ್ಕಾಗಿ ಸಮಾಜ ಏನು ಬಯಸುವುದೋ ಹಾಗೇ ಇರಬೇಕಾಗುವುದು. ಮಾತು ನಡೆ ನುಡಿ ಎಲ್ಲವೂ ಅಪ್ಪನ ಗೌರವವನ್ನು ಕಾಪಾಡಬೇಕು. ಮದುವೆ ಆಗಿ ಗಂಡನ ಮನೆಗೆ ಹೋದಾಗ ಆಕೆಯ ಜೀವನ ಗಂಡ ಮತ್ತು ಗಂಡನ ಮನೆಯವರ ಗೌರವವನ್ನು ಕಾಪಾಡುವುದಾಗಿದೆ. ಒಟ್ಟಾರೆ ಹೆಣ್ಣು ಮಗು ಹುಟ್ಟಿದ ದಿನದಿಂದ ಬೇರೆಯವರ ಗೌರವ ಕಾಪಾಡುವುದಕ್ಕಾಗಿ ತನ್ನ ಜೀವನವನ್ನು ಸವೆಸಬೇಕಾದ ಅಗತ್ಯ ಇರುವುದು. ಯಾವ ಮನೆಯಲ್ಲಿಯೂ ಸಹ ಆಕೆಗೆ ಏನು ಬೇಕು ಎಂಬುದು ಪ್ರಮುಖವಾಗುವುದಿಲ್ಲ.  ಬದಲಾಗಿ ತಾನು ಇರುವ ಮನೆಯ ಗೌರವಕ್ಕಾಗಿ ತನ್ನ ಜೀವನವನ್ನು ಮೀಸಲಾಗಿಡಬೇಕಾದ ಪರಿಸ್ಥಿತಿ ಇರುವುದು.

ಲೈಂಗಿಕ ಸ್ವಾತಂತ್ರ್ಯ

ಒಂದಕ್ಕಿಂತ ಹೆಚ್ಚಿನವರೊಂದಿಗೆ ಪುರುಷ ದೈಹಿಕ ಸಂಪರ್ಕ ಇರಿಸಿಕೊಂಡರೆ ಆತ ರಸಿಕ, ಅದೇ ಮಹಿಳೆ ಸಂಬಂಧ ಇರಿಸಿಕೊಂಡರೆ ಆಕೆ ಸೂಳೆ ಎಂದು ನಮ್ಮ ಸಮಾಜ ವ್ಯಾಖ್ಯಾನಿಸುವುದು. ಪುರುಷನಾದವನು ತನಗೆ ಇಷ್ಟದ ರೀತಿಯ ಲೈಗಿಂಕ ಸ್ವಾತಂತ್ರ್ಯ ಹೊಂದಿರುವನು. ನಮ್ಮ ಪುರಾಣಗಳು, ನಮ್ಮ ದೇವರುಗಳು, ಕಥೆಗಳು ಇವೆಲ್ಲವೂ ಪುರುಷನಾದವನು ಹಲವರೊಂದಿಗೆ ಸಂಬಂಧ ಇರಿಸಿಕೊಳ್ಳುವುದನ್ನು ಒಪ್ಪಿಕೊಂಡಿರುವುದು. ಆದರೆ ಅದೇ ಮಹಿಳೆಯರ ಬಗ್ಗೆ ಅಭಿಪ್ರಾಯ ಭಿನ್ನವಾಗಿರುವುದು. ಇಷ್ಟ ಇರಲಿ ಇಲ್ಲದೇ ಇರಲಿ ಮದುವೆಯಾದ ಗಂಡನೊಂದಿಗೆ ಆತನಿಗೆ ಅಗತ್ಯವಿದ್ದಾಗ ಲೈಗಿಂಕ ಕ್ರಿಯೆಗೆ ಸಹಕರಿಸಬೇಕು. ಇದು ಪುರುಷ ಪ್ರಧಾನ ವ್ಯವಸ್ಥೆಯ ಸಂಪ್ರದಾಯವಾಗಿರುವುದು. ಇಂದಿನ ಆಧುನಿಕ ಯುಗದಲ್ಲಿಯೂ ಮದುವೆಯ ದೃಢೀಕರಣದಿಂದ ನಡೆಯುವ ಕೆಲವೊಂದು ಲೈಗಿಂಕ ಕ್ರಿಯೆ ಸಮಾಜ ಒಪ್ಪಿತ ರೇಪ್ ಎಂದೇ ಗುರುತಿಸಬಹುದು. ಆ ಬಗ್ಗೆ ಮುಕ್ತವಾಗಿ ಮಾತನಾಡುವ ಸ್ವಾತಂತ್ರ್ಯ ಸಹ ಮಹಿಳೆಯರಿಗೆ ಇಲ್ಲದಿರುವುದನ್ನು ಕಾಣಬಹುದಾಗಿದೆ. ಒಟ್ಟಾರೆ ಮಹಿಳೆಯರಿಗೆ ಲೈಂಗಿಕ ಸ್ವಾತಂತ್ರ್ಯ ಎಂಬುದು ಗಗನ ಕುಸುಮವಾಗಿದೆ. ಅನಾದಿ ಕಾಲದಿಂದಲ್ಲೂ ಈ ರೀತಿಯ ಶೋಷಣೆ ನಡೆದೇ ಇರುವುದು ಈಗಲೂ ಸಹ ಇದು ಮುಂದುವರೆದಿರುವುದು.

ಮಡಿವಂತಿಕೆಯ ಹೆಸರಿನಲ್ಲಿ ಸ್ವಾತಂತ್ರ್ಯದ ಹರಣ

ಮುಟ್ಟು, ಮಡಿ ಮೈಲಿಗೆಯ ಹೆಸರಿನಲ್ಲಿ ಮಹಿಳೆಯನ್ನು ಸಮಾಜ ವ್ಯವಸ್ಥಿತಿವಾಗಿ ಪ್ರಮುಖ ಕಾರ್ಯಗಳಿಂದ ದೂರ ಇರಿಸಿರುವುದು. ಕೆಲವೊಂದು ಸ್ಥಳಗಳಿಗೆ ನಿರ್ಭಂಧವನ್ನು ಹೇರಲಾಗಿರುವುದು. ನೈಸಗಿ೯ಕವಾಗಿ ಮಹಿಳೆಗೆ ಆಗುವ ಮುಟ್ಟನ್ನು ಮಡಿ ಮೈಲಿಗೆಯೊಂದಿಗೆ ಬೆರಸಿ ಮೂರು/ಐದು/ಏಳು ಈ ರೀತಿಯಾಗಿ ಮನೆಯಿಂದ ಹೊರಗೆ ಕುಳಿಸುವ ಸಂಪ್ರದಾಯವನ್ನು ಇನ್ನೂ ಮುಂದುವರೆಸಿಕೊಂಡು ಬರುತ್ತಿರುವೆವು. ಹೊಸದಾದ ಜೀವವನ್ನೆ ಸೃಷ್ಟಿಸುವ ಅರ್ಹತೆಯಿರುವ ಮಹಿಳೆಯನ್ನು ಮಡಿವಂತಿಕೆಯ ಹೆಸರಿನಲ್ಲಿ ಕೆಲವು ಪ್ರದೇಶಗಳಿಂದ ಹೊರಗಿಡುವುದು, ಮನೆಯಿಂದ ಹೊರಗೆ ಕುಳಿಸುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಅದೇ ರೀತಿಯಾಗಿ ಪ್ರಮುಖ ಕಾರ್ಯಗಳನ್ನು ಪ್ರಾರಂಭಿಸುವಾಗಲೂ ಮಹಿಳೆಗೆ ಮಡಿ ಮೈಲಿಗೆಯ ಕಾರಣದಿಂದ ದೂರ ಇಡುವುದನ್ನು ಕಾಣಬಹುದಾಗಿದೆ. ದುರಾದೃಷ್ಟವೆಂದರೆ ಇಂತಹ ಅನಿಷ್ಟ ಸಂಪ್ರದಾಯವನ್ನು ಮಹಿಳೆಯರೇ ಮುಂದುವರೆಸುತ್ತಿರುವುದಾಗಿದೆ. 


ಈ ರೀತಿಯಾಗಿ ಹಲವಾರು ಕಾರಣಗಳಿಂದ ಎಲ್ಲ ಮಹಿಳೆಯರೂ ತಮಗೆ ಇಷ್ಟದ ಬದುಕು ಸಾಗಿಸಲು ಸಾಧ್ಯವಾಗುತ್ತಿಲ್ಲ. ನಾವು ನಡೆಸುವ ಜೀವನ ಚೆನ್ನಾಗಿಯೇ ಇದೆ ಎಂದು ಕೆಲವರು ಹೇಳಿದರೆ, ನಮ್ಮ ಹಣೆ ಬರಹವೇ ಇಷ್ಟು ಎಂದು ಇನ್ನು ಕೆಲವರು ಹೇಳುವರು. ಹೆಚ್ಚಿನವರು ಈ ಪುರುಷ ಪ್ರಧಾನ ವ್ಯವಸ್ಥೆಗೆ ಪೂರಕವಾಗಿಯೇ ಮಾತನಾಡುವರು. ಆದರೆ ನಗರ ಪ್ರದೇಶಗಳಲ್ಲಿ ನಿಧಾನವಾಗಿ ಬದಲಾವಣೆ ಆಗುತ್ತ ಇರುವುದು. ಎಲ್ಲಾ ಹಂತಗಳಲ್ಲಿಯೂ ಬದಲಾವಣೆ ಆಗಬೇಕಾದರೆ ಸಮಾಜದಲ್ಲಿ ಹೆಚ್ಚಿನ ಚಚೆ೯ ಆಗಬೇಕಾದ ಅಗತ್ಯ ಇದೆ. ಈ ಬಾರಿಯ ಮಹಿಳಾ ದಿನಾಚರಣೆ ಅದಕ್ಕೆ ಪೂರಕವಾದ ವಾತಾವರಣವನ್ನು ಕಲ್ಪಿಸುವಂತೆ ಆಗಲಿ ಎಂದು ಆಶಿಸೋಣ.


ತಾಗುಲಿ : International Women's Day, Vivek Betkuli

A very good and comprehensive article ,highlighting the problems a is womam has to face ,in spite of her education and knowing the way she has to go ahead.Pray a woman gets her
rightful due in the very early future.

There is no exaggeration in this article, MrVivek. We have talked about known disparities. What do we do to achieve the equity? Every single point you have mentioned here I had experienced or experiencing. In no means, I do not consider victim. If I feel that way imagine millions of women do not have fraction of freedom I have. I always here this on Woman's day and we forget it on the next day. That is because women also feel threatened to push for their rights. Many women are ostracized from the society trying to demand equity and equality. I hope next generation of women fight for what they deserve.