ಭಾಷೆಯ ಕಲಿಕೆ

ಭಾಷೆಯ ಕಲಿಕೆ

*** ಶೃತಿ ಅರವಿಂದ್ ***

ಆಯೋಜಿತ ಮತ್ತು ಅನಾಯೋಜಿತ
ಒಂದು ಹೊಸ ಭಾಷೆ ಕಲಿಯಲು ಅಥವಾ ಕಲಿಸಲು ಯಾವ ದಾರಿ ಉತ್ತಮ? ನಿಗದಿತವಾಗಿ ಪೂರ್ವಾಯೋಜಿತವಾದ 'ಪಾಠ'ಗಳ ಮೂಲಕ ವ್ಯವಸ್ಥಿತವಾಗಿ (organized, formal, step-by- step method) ಕಲಿಯು(ಸು)ವುದೋ? ಇಲ್ಲವೇ ಅನಿಶ್ಚಿತವಾಗಿ ಅಲ್ಲಲ್ಲಿ ಪ್ರಯೋಗದಲ್ಲಿ ಕಂಡುಬರುವ ಅಂಶಗಳನ್ನು ಬಂದಬಂದ ಹಾಗೆ ಅಳವಡಿಸಿಕೊಳ್ಳುತ್ತ ಕಲಿಯು(ಸು)ವುದು (random, ad-hoc method) ವಾಸಿಯೋ? ಯಾವ ವಿಧಾನ ಹೆಚ್ಚು  ಪರಿಣಾಮಕಾರಿ?

ಉದಾಹರಣೆಗೆ, ನಾನು ಒಂದು ಹೊಸ ಭಾಷೆಯನ್ನು ಕಲಿಯಲು ಹೊರಟೆ.  ನಾನು ತಮಿಳು ಕಲಿಯಬೇಕಿತ್ತು. ಹಾಗಾಗಿ "ಕನ್ನಡದ ಸಹಾಯದಿಂದ ತಮಿಳು ಕಲಿಯಿರಿ" ಎಂಬ ಪುಸ್ತಕದಿಂದ ಆರಂಭಿಸಿದೆ. ಈ ಪುಸ್ತಕದಲ್ಲಿ ಪ್ರತಿಯೊಂದನ್ನೂ ಕನ್ನಡದಿಂದ ಅನುವಾದ ಮಾಡಿ ಹೇಳಿಕೊಡುವ ಪ್ರಯತ್ನ. ಮೊದಲು ಲಿಪಿ ಕಲಿಯುವುದು, ಅಂದರೆ ಕನ್ನಡ ವರ್ಣಮಾಲೆಯ ಸಹಾಯದಿಂದ ತಮಿಳು ವರ್ಣಮಾಲೆ ಕಲಿಯುವುದು.  ನಂತರ ಅರ್ಥಗಳೊಂದಿಗೆ ಸಣ್ಣ ಪದಗಳು. ನಂತರ ಸರಳ ವಾಕ್ಯಗಳನ್ನು. ಹೀಗೆ ಮುಂದುವರಿಯುವುದು. ಕೊನೆಯಲ್ಲಿ ಅಭ್ಯಾಸಗಳು, ತಮಿಳಿನಲ್ಲಿ ಹಲವಾರು ವಿವಿಧ ಉದಾಹರಣೆಯ ವಾಕ್ಯಗಳನ್ನು ಅನುವಾದಿಸುವುದು. ಇಷ್ಟೆಲ್ಲಾ ಮಾಡಿದ ಮೇಲೆ ನೀವು ತಮಿಳನ್ನು ಸಂಪೂರ್ಣವಾಗಿ ಕರಗತ ಮಾಡಿಕೊಂಡಿದ್ದೀರಿ ಎಂದು ಸಾಬೀತಾದಂಗೆ!

ಯಾಕೋ ಈ ಪುಸ್ತಕದ ವಿಧಾನ ನನಗೆ ಅಷ್ಟು ಇಷ್ಟವಾಗಲಿಲ್ಲ. ನಾನು ಟಿವಿಯಲ್ಲಿ ತಮಿಳು ಚಾನೆಲ್‌ ಹಾಕಿದೆ. ಈ ಚಾನಲ್‌ನಲ್ಲಿ ಅನೇಕ ಚಲನಚಿತ್ರಗಳು ಮತ್ತು ಧಾರಾವಾಹಿಗಳನ್ನು ನೋಡಲಾರಂಭಿಸಿದೆ. ಮತ್ತು ನಿಧಾನವಾಗಿ ನನಗೇ ಗೊತ್ತಾಗದೆ ಸಾಕಷ್ಟು ತಮಿಳು ಕಲಿತಿದ್ದೆ!  ಆರಾಮಾಗಿ ಏನೂ ಒತ್ತಡವಿಲ್ಲದೆ, ಪದಗಳನ್ನು ಮತ್ತು ನಂತರ ವಾಕ್ಯಗಳನ್ನು ಕಲಿತುಬಿಟ್ಟೆ. ಮೊದಮೊದಲು ಸಂದರ್ಭಕ್ಕೆ ತಕ್ಕಂತೆ ಅರ್ಥಮಾಡಿಕೊಳ್ಳುವುದು, ಕೆಲವನ್ನು ಊಹಿಸುವುದು ಮತ್ತು ನಿಧಾನವಾಗಿ ನನ್ನ ಪದಭಂಡಾರವನ್ನು ಬಳಸಿಕೊಂಡು ಹೆಚ್ಚಿನದನ್ನು ಅರ್ಥಮಾಡಿಕೊಳ್ಳುವುದು, ಹೀಗೆ.

ಈಗ ನೀವೇ ಯೋಚಿಸಿ, ಒಂದು ಮಗುವು ತನ್ನ ಮಾತೃಭಾಷೆಯನ್ನು ಹೇಗೆ ಕಲಿಯುತ್ತೆ? ಇದು ಆ ಮಗುವಿನ ಮೊದಲ ಭಾಷೆಯಾದ್ದರಿಂದ ಬೇರೆ ಯಾವ ಭಾಷೆಯ ಅನುವಾದದ ಸಹಾಯವೂ ಇಲ್ಲ.  ಪೋಷಕರು ಭಾಷೆಯನ್ನು ಕಲಿಸಲು ವರ್ಣಮಾಲೆಯಿಂದ ಮತ್ತು ಸರಳ ಶಬ್ದಗಳಿಂದ ಪ್ರಾರಂಭವಾಗಿ ಮಗುವಿಗೆ ಶಿಸ್ತಿನಿಂದ ಕುಳಿತು ಕಲಿಸಲು ಶ್ರಮ ಪಡುತ್ತಾರೆಯೇ?  ಇಲ್ಲ!  ತನ್ನ ಸುತ್ತಲಿನ ಜನರ ಮಾತುಗಳು ಸಹಜವಾಗಿ ಕಿವಿಯ ಮೇಲೆ ಬೀಳುತ್ತಿರುತ್ತವೆ. ಮಗು ತನಗೇ ತಿಳಿಯದೆ ನಿಧಾನವಾಗಿ ಅಷ್ಟು ಭಾಷೆ ಗ್ರಹಿಸಿ, ನೋಡು ನೋಡುತ್ತಲೇ ಪುಟ್ಟ ಪದಗಳನ್ನು, ನಂತರ ನುಡಿಗಟ್ಟುಗಳನ್ನು, ನಂತರ ವಾಕ್ಯಗಳನ್ನು ಸರಿಯಾದ ಸನ್ನಿವೇಶದಲ್ಲಿ ಬಳಸಲು ಪ್ರಾರಂಭಿಸುವುದು! ಹುಟ್ಟಿದ ಕೇವಲ ೧.೫ ವರ್ಷಗಳಲ್ಲಿ ಇಷ್ಟೆಲ್ಲಾ!  ಒಬ್ಬ ಬೆಳೆದ ಮನುಷ್ಯ ಸಂಪೂರ್ಣವಾಗಿ ಒಂದು ಹೊಸ ಭಾಷೆಯನ್ನು ಕಲಿಯಲು ಎಷ್ಟು ಸಮಯ ತೆಗೆದುಕೊಳ್ಳಬಹುದು ಊಹಿಸಿದರೆ, ನಿರರ್ಗಳವಾಗಿ ಮಾತನಾಡಲು ಸುಮಾರು ೩ ವರ್ಷ ಬೇಕಾದೀತು. ಅದೂ ಸಹ ಆ ಅವಧಿಯಲ್ಲಿ ಸಂಪೂರ್ಣವಾಗಿ ಕೇಂದ್ರೀಕೃತ ಪ್ರಯತ್ನಗಳನ್ನು (concentrated effort) ಮಾಡಿದರೆ ಮಾತ್ರ. ಆದರೆ ಮಗು ಹಾಗಲ್ಲ, ಈ ಒಂದು ವರ್ಷದಲ್ಲಿ ಕೇವಲ ಮಾತನಾಡುವುದಷ್ಟೇ ಅಲ್ಲ, ನಡೆಯುವುದು, ತನ್ನ ಕೈ, ಕಾಲುಗಳನ್ನೂ ಬಳಸುವುದು, ಮತ್ತು ಇತರ ಹಲವಾರು ಕ್ರಿಯೆಗಳನ್ನು ಕಲಿಯುತ್ತದೆ.  ಇದ್ಯಾವುದರ ಬಗ್ಗೆಯೂ ಹೆಚ್ಚು ಗಮನ ಕೊಡದೆಯೇ!

ಮಗು ವಿಧಾನ
ನೀವೇ ಯೋಚಿಸಿ. ಮಗುವು ಭಾಷೆಯನ್ನು ಕಲಿಯುವ ಈ ರೀತಿ ಹೆಚ್ಚು ಪರಿಣಾಮಕಾರಿಯಲ್ಲವೇ? ಏಕೆಂದರೆ ಸಮಸ್ತ ಪದಗಳ ಭಂಡಾರದ ತಳಹದಿಯಿಂದ ಕಲಿಯುವ ಬದಲು, ದೈನಂದಿನ ವಾರ್ತಾಲಾಪದಲ್ಲಿ ಹೆಚ್ಚಾಗಿ ಬಳಕೆಯಾಗುವ ಪದಗಳು ಮತ್ತು ವಾಕ್ಯಗಳನ್ನು ಸಹಜವಾಗಿ ಗ್ರಹಿಸಿ, ಅಳವಡಿಸಿಕೊಂಡು ಕಲಿಯುವುದರಿಂದ, ಹೆಚ್ಚು ಬೇಕಾಗುವ ಪದಗಳನ್ನೇ ಬೇಗ ಕಲಿತು, ಬೇಗ ಬೇಗ ಸುಲಭವಾಗಿ ಮಾತನಾಡಲು ಕಲಿಯಬಹುದು.

ಇದಕ್ಕೆ ಹೋಲಿಸಿದಾಗ, ನಿಗದಿತ ಹಂತಗಳಲ್ಲಿ ಕಲಿತು, ವ್ಯಾಕರಣಾದಿ ಅಂಶಗಳಲ್ಲಿ ಪಾಂಡಿತ್ಯ ಪಡೆದು, ಮುಂದೆ ಬಳಕೆಗೆ ಬರಲಿ ಬಿಡಲಿ ಲೆಕ್ಕಿಸದೆ ಸಮಸ್ತವೂ ಕಲಿಯುವ ರೀತಿಯು, ಅನಾವಶ್ಯಕವಾಗಿ ಕಠಿಣ ಮತ್ತು ಹೆಚ್ಚು ನಿಧಾನ ಅಲ್ಲವೇ?
ಹೀಗೆಯೇ ಸಂಗೀತ ಕಲಿಯುವುದನ್ನು ನೋಡಿದರೆ, ಆಗಾಗ್ಗ ಕಿವಿಯ ಮೇಲೆ ಬೀಳುವ ಬೇರೆ ಬೇರೆ ಹಾಡುಗಳನ್ನು ನಿರಾಳವಾಗಿ ಗ್ರಹಿಸಿ ಅನುಸರಿಸಲು ತಾನಾಗೇ ಪ್ರಯತ್ನಿಸುವ ಮಗು ಕಕ್ಷೆಯಲ್ಲಿ ಕುಳಿತು ಗುರುಗಳಿಂದ ಬೋಧಿಸಲ್ಪಡುವುದಕ್ಕಿಂತ ಹೆಚ್ಚು ಉತ್ಸಾಹದಿಂದ ಮತ್ತು ಸರಾಗವಾಗಿ, ಚೆನ್ನಾಗಿ ಕಲಿಯುತ್ತದೆ ಎಂದು ನನ್ನ ಅನುಭವ.

ಇನ್ನೊಂದು ಉದಾಹರಣೆ. ನನ್ನ ಸ್ವಂತ ಅನುಭವದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ (competitive exams) ತಯಾರಿ ಮಾಡುವಾಗ, ಹಿಂದಿನ ವರ್ಷಗಳ ಹಳೆಯ ಪ್ರಶ್ನಾಪತ್ರಿಕೆಗಳಿಂದ ಅಲ್ಲೊಂದು ಇಲ್ಲೊಂದು (random) ಪ್ರಶ್ನೆಗಳನ್ನು ಪ್ರಯತ್ನಿಸುವುದು,  ಮತ್ತು ವೇಗವಾಗಿ ಮುಂದಿನ ಪ್ರಶ್ನೆಗೆ ಹೋಗುವುದು : ಈ ವಿಧಾನವು ಕೂಲಂಕಷವಾಗಿ ಪಠ್ಯಪುಸ್ತಕವನ್ನು ಮೊದಲು ಕರಲತಾಮಲಕ ಮಾಡಿಕೊಂಡು ಮುಂದುವರಿಯುವ ರೀತಿಗಿಂತ ಹೆಚ್ಚು ಪ್ರಭಾವಶಾಲಿಯಾಗಿರುತ್ತದೆ.  
ಜೀವನದಲ್ಲೂ ಸಹ ಇನ್ನೇನು, ಪ್ರಪಂಚದ ಆಳಿತು-ಒಳಿತುಗಳ ಅನುಭವ ಮತ್ತು ವ್ಯವಹಾರ ಜ್ಞಾನ ಹೀಗೆಯೇ ತಾನೇ ಬೆಳೆಯುವುದು. ಪ್ರತಿ ಘಟನೆಯು ತನ್ನದೇ ಒಂದು ವಿಶಿಷ್ಟ ಅನುಭವ ಮತ್ತು ಪಾಠವನ್ನು ಕಲಿಸುತ್ತದೆಯಲ್ಲವೇ?   ಯಾವುದೇ ಶಾಲೆ ಅಥವಾ ಪಠ್ಯ ಪುಸ್ತಕವು ಹಂತ ಹಂತವಾಗಿ ಈ ವಿಷಯಗಳನ್ನು ನಮಗೆ ಕಲಿಸಲು ಸಾಧ್ಯವಿಲ್ಲ.

ನೀವೂ ನಿಮ್ಮ ಮಕ್ಕಳಿಗೆ ಯಾವುದೇ ಹೊಸ ಭಾಷೆ ಕಲಿಸಲು, ಯಾವುದೇ ಹೊಸ ವಿಷಯ ಅಥವಾ ಕಲೆ (ಹಾಡುಗಾರಿಕೆ, ಸಂಗೀತ, ಈಜು, ಕರಾಟೆ, ನೃತ್ಯ, ಚಿತ್ರಕಲೆ ಇತ್ಯಾದಿ) ಈ ಎರಡನೇ ('ಅನಾಯೋಜಿತ' ಅಥವಾ 'ಅವ್ಯವಸ್ಥಿತ' (unorganized)) ಕ್ರಮವನ್ನು ಬಳಸ ಬಹುದು.  ಹೇಗೆ ನಾವು ಮಗುವಿಗೆ ವಿವಿಧ ರೀತಿಯ ಆಹಾರವನ್ನು ಆಯ್ಕೆಯಾಗಿ ಮುಂದಿಡುತ್ತೇವೋ, ಹಾಗೆಯೇ ಕಲಿಯುವ ವಸ್ತುಗಳನ್ನು ಅವರ ಮೇಲೆ ಹೇರದೆ ಕೇವಲ ಪ್ರಸ್ತುತಪಡಿಸಬೇಕು. ಹೀಗೆ ಮಾಡಿದಾಗ ಅವರಿಗೆ ಅನುಕೂಲವಾಗುವ ಗತಿಯಲ್ಲಿ ಇಷ್ಟಪಟ್ಟು ಕಲಿತಾರು. ಅದೂ ತಮಗೆ ರುಚಿ ಇರುವ ಕ್ಷೇತ್ರದಲ್ಲಿ. ಈ ರೀತಿ ನೀವು ಮಗುವಿನ ಅಭಿರುಚಿಗಳ ಬಗ್ಗೆಯೂ ತಿಳಿಯಬಹುದು.

ಖಂಡಿತವಾಗಿಯೂ  ಈ ವಿಧಾನವನ್ನು ಸಕ್ರಮ ಕಡ್ಡಾಯ ಶಿಕ್ಷಣದಲ್ಲಿ (formal compulsory education) ಕೂಡ ಅಳವಡಿಸಬಹುದು. ನಿಗದಿತ ಪಾಠಗಳ ಮಧ್ಯೆ ಮಧ್ಯೆ ಸಾಕಷ್ಟು ಅನಿರ್ದಿಷ್ಟ (unplanned) (ಆದರೆ ವಿಷಯಕ್ಕೆ ಸಂಬಂಧವುಳ್ಳ) ಮಾಹಿತಿಯನ್ನೂ, ಪ್ರಶ್ನೋತ್ತರಗಳನ್ನೂ, ಚರ್ಚೆಗಳನ್ನೂ ಸೇರಿಸಿಕೊಳ್ಳುವುದರಿಂದ ಮಕ್ಕಳು ಹೆಚ್ಚು ಉತ್ಸಾಹದಿಂದ ಮತ್ತು ಆಸಕ್ತಿಯಿಂದ ಕಲಿಯುತ್ತಾರೆ.

ವಿದೇಶದಲ್ಲಿ ಕನ್ನಡ ಕಲಿಕೆ
ಈಗ ಪ್ರಸ್ತುತ ಪರಿಸ್ಥಿತಿಯಲ್ಲಿನ ಮುಖ್ಯ ವಿಷಯವೆಂದರೆ America ದಲ್ಲಿನ ಕನ್ನಡಿಗರ ಮಕ್ಕಳಿಗೆ ಕನ್ನಡ ಕಲಿಸುವುದು.  ಹುಟ್ಟಿದಾಗಿನಿಂದಲೇ ಮಕ್ಕಳಿಗೆ ಪೋಷಕರು ಮನೆಯಲ್ಲಿಯೇ ಕನ್ನಡವನ್ನು ದೈನಂದಿನದಲಿ ಕಡ್ಡಾಯವಾಗಿ ಅಳವಡಿಸುವುದು ಉತ್ತಮ. ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು. ನಾವು ಕನ್ನಡದವರಾಗಿದ್ದು ನಮ್ಮ ಮಕ್ಕಳಿಗೆ ಕನ್ನಡ ಕಲಿಸಲು ಬೇರೆಯವರಲ್ಲಿಗೆ ಕಳಿಸಬೇಕೇ?  ಹೀಗೆ ಕಳಿಸಿದರೆ ಮಕ್ಕಳಿಗೆ ಕನ್ನಡ ಹತ್ತೀತೆ?

ನಾವು ಮೊದಲಿನಿಂದ ಮಾಡಬೇಕಾದ್ದು ಇಷ್ಟು. ಬರೀ ಪೋಷಕರು ಮಕ್ಕಳೊಂದಿಗೆ ಕನ್ನಡದಲ್ಲಿ ಮಾತಾಡಾಡಿದರೆ ಸಾಲದು; ಮಕ್ಕಳೂ ಮನೆಯವರೊಂದಿಗೆ ಕಡ್ಡಾಯವಾಗಿ ಕನ್ನಡದಲ್ಲೇ ಮಾತಾಡಲು ನಿಯಮಿಸಬೇಕು. Americaದಲ್ಲಿ Englishಇನ ಪ್ರಭಾವ ಎಲ್ಲೆಡೆ, ಆದರಿಂದ ಇಲ್ಲಿ ಇದು ಮಾಡಲು ಹೆಚ್ಚು ಶ್ರಮ ಬೇಕು. ಮಕ್ಕಳು ಒಂದು ಎಡರು ವರ್ಷದ ಹರಯದಲ್ಲಿರುವಾಗಲೇ ಸಣ್ಣ ಸಣ್ಣ ವಾಕ್ಯಗಳು ಮಾತಾಡುವ ಹಂತದಲ್ಲಿರುವಾಗಲೇ ಪ್ರತಿಯೊಂದು ವಾಕ್ಯವೂ ಕನ್ನಡದಲ್ಲಿರಬೇಕು ಎಂದು ಕಾಯಿದೆ ಮಾಡಬೇಕು. ಇದಕ್ಕೆ ಒಂದು ವಾಕ್ಯವೂ ಹೊರತಾಗಿರಬಾರದು.  ಮಕ್ಕಳು ಸ್ವಲ್ಪ ದೊಡ್ಡವರಾಗಿ English ನಲ್ಲೇ ಮಾತಾಡಾಡುವುದಾಗಿ ಹಠ ಮಾಡಲು ಆರಂಭವಾಗುವುದಕ್ಕಿಂತ ಮೊದಲೇ ನಮ್ಮ ಮತ್ತು ಕನ್ನಡದ ಆಳ್ವಿಕೆಯನ್ನು ಸ್ಥಾಪಿಸಬೇಕು. (ನಿಜವಾಗಿಯೂ ಇದೇ ನಾನು ನಮ್ಮ ಮನೆಯಲ್ಲಿ ಮಾಡಿದ್ದು.)
ಇತರ ಕನ್ನಡಿಗರಿಗೆ ಹೇಳಬೇಕು "ನಮ್ಮ ಮಗುವನ್ನು ಕನ್ನಡದಲ್ಲೇ ಮಾತಾಡಿಸಿ" ಎಂದು. ನಾವು ಇತರ ಕನ್ನಡಿಗರ ಮಕ್ಕಳನ್ನು ಕನ್ನಡದಲ್ಲೇ ಮಾತಾಡಿಸಬೇಕು.  ಹೀಗೆ ತಾನೇ ಸಹವಾಸದಿಂದ  ಕನ್ನಡಕ್ಕೆ ಅನುಕೂಲವಾದ ಸಾಮಾಜಿಕ ಪರಿಸ್ಥಿತಿ ನಿರ್ಮಾಣವಾಗುವುದು. Americaಗೆ ಹೊಸದಾಗಿ ಬಂದ ಕನ್ನಡಿಗರ ಮೂಲಮಂತ್ರ ಹೀಗಿರಬೇಕು "English ಕಲಿಯುವುದು ತಡವಾದರೂ ಚಿಂತೆಯಿಲ್ಲ, ಕನ್ನಡ ಧೃಢವಾಗಬೇಕು!"

ಆದರೆ ದುರದೃಷ್ಟವಶಾತ್ ಹೀಗೆ ಮಾಡದೆ ಕಾಲ ಮೀರಿ ಮಕ್ಕಳು Englishನಲ್ಲೆ ಬೆಳೆದಿರುವ ಸಂದರ್ಭದಲ್ಲಿ, ಹೇಗೆ ಕನ್ನಡ ಕಲಿಸಬಹುದು? ಮೊಟ್ಟ ಮೊದಲು Englishಇನ ಮೂಲಕ ಕನ್ನಡ ಕಲಿಸುವ ಪ್ರಯತ್ನ ಬಿಡಬೇಕು ಎಂದು ನನ್ನ ಅನಿಸಿಕೆ. ಇಲ್ಲದಿದ್ದರೆ ಇದು ಹೇಗಾಗುತ್ತದೆಯೆಂದರೆ ಒಂದು ದೊಡ್ಡ English ವಾಕ್ಯವನ್ನು ಉಪಯೋಗಿಸಿ ಒಂದೇ ಒಂದು ಕನ್ನಡ ಪದವನ್ನು ಪರಿಚಯಿಸಿದರೆ ಮಕ್ಕಳ English ಜ್ಞಾನ ವೃದ್ಧಿಸುತ್ತದೆ ಹೊರತು ಕನ್ನಡ ಕುಗ್ಗಿಹೋಗುತ್ತದೆ!

ಮನೆಯಲ್ಲಿ ದಿನಬಳಕೆಗಾಗಿ ಬಳಸುವ ಕನ್ನಡದ ಮೂಲಕ ಹೊಸ ಕನ್ನಡ ಪದಗಳನ್ನು ಪರಿಚಯಿಸಲು ಪ್ರಯತ್ನಿಸಬೇಕು. ಮತ್ತು ನೋಡಬಹುದಾದ ವಸ್ತುವನ್ನು ತೋರಿಸಿ, ಉದಾಹರಣೆಗೆ ಕುರ್ಚಿಯನ್ನು ತೋರಿಸಿ 'ಪೀಠ', 'ಆಸನ' ಎನ್ನುವುದು.  ಇಲ್ಲವಾದರೆ ಸಾಂದರ್ಭಿಕವಾಗಿ ಪದಗಳನ್ನು ಪರಿಚಯಿಸುವುದು.  ಹೀಗೆ.  ನನ್ನ ಪ್ರಕಾರ ಅತ್ಯುತ್ತಮ ಉಪಾಯವೆಂದರೆ ಕನ್ನಡ ಕಥೆಗಳನ್ನು ಓದುವುದು ಮತ್ತು ಮಧ್ಯೆ ಬರುವ ಹೊಸ ಪದಗಳನ್ನು ವಿಶ್ಲೇಷಿಸುವುದು.  ಇಲ್ಲವಾದರೆ ಕನ್ನಡ ಚಲನಚಿತ್ರ ಅಥವಾ ಧಾರಾವಾಹಿಗಳನ್ನು ನೋಡುವುದು. ವಿಶೇಷವಾಗಿ cartoonಗಳು. ಇದರಿಂದ ಮನೋರಂಜನೆಯೂ ಆಯಿತು.

ಅದರಲ್ಲೂ ಲಿಪಿ (ಓದು-ಬರಹ) ಕಲಿಯುವುದಂತೂ English ನ ಮೂಲಕ ಸಾಧ್ಯವಾದಷ್ಟು ಮಾಡಬಾರದು. ಇಂಗ್ಲಿಷ್ನಲ್ಲಿ 'spelling' ಪರಿಕಲ್ಪನೆ ಇದೆ ಮತ್ತು 'phonetics' ಅಂದರೆ 'ಉಚ್ಚಾರಣೆ' ಬೇರೇ.  ಇದರಿಂದ English ಅಕ್ಷರಗಳಿಗೂ ಕನ್ನಡ ಅಕ್ಷರಗಳಿಗೂ ಒಂದಕ್ಕೊಂದು ಹೊಂದಿಸಲು ಆಗುವುದಿಲ್ಲ. ಅವನ್ನು ಸುಮಾರಾಗಿ ಹೊಂದಿಸಿ ಹೇಳಿಕೊಡುವುದು ಒಂದು ತಲೆನೋವ್ವು! ನೇರವಾಗಿ ಕನ್ನಡ ಅಕ್ಷರಗಳನ್ನು ಅವುಗಳ ಉಚ್ಚಾರಣೆಯೊಂದಿಗೆ ಕಲಿಸುವುದು ಸುಲಭ.

ಮತ್ತೊಂದು ಸಾಧ್ಯತೆ: ಇನ್ನೊಂದು ಭಾರತೀಯ ಭಾಷೆ ಕಲಿಯಬೇಕಾದರೆ, ಉದಾಹರಣೆಗೆ ನನ್ನ ಮಗ ಸಂಸ್ಕೃತ ಕಲಿಯಲು ಹೊರಟಿದ್ದಾನೆ.  ಅವನ ಗುರುಗಳು, ಉದ್ದೇಶವಾಗಿಯೇ English ಮೂಲಕ ಕಲಿಸುವುದನ್ನು ಬಹಿಷ್ಕರಿಸಿ ಕನ್ನಡ ಅಥವಾ ಹಿಂದಿ ಅಥವಾ ಇತರ ಭಾರತೀಯ ಭಾಷೆಯ ಮೂಲಕ ಕಲಿಸಲು ನಿರ್ಧರಿಸಿದ್ದಾರೆ.  ಬರಿಯ ಅಕ್ಷರಗಳನ್ನು ಹೊಂದಿಸಲು ಮಾತ್ರವಲ್ಲ, ವಾಕ್ಯ ರಚನೆ ಮತ್ತು ವ್ಯಾಕರಣಗಳನ್ನೂ ಹೋಲಿಸಿ ಸುಲಭವಾಗಿ ಸಹಜವಾಗಿ ಕಲಿಸುತ್ತಿದ್ದಾರೆ. ಈಗಾಗಲೇ ಈ ವಿಧಾನಕ್ಕೆ ಅಳವಡಿಸಿರುವ ನಮಗೆ ಈ ರೀತಿ ತತ್ವ ಅಭ್ಯಾಸಗಳುಳ್ಳ ಗುರುಗಳು ಸಿಕ್ಕಿರುವುದು ಸಂತೋಷ!


ತಾಗುಲಿ : Teach and Learn Language, Shruthi Aravind