ಆಸೆಯೇ ದುಃಖಕ್ಕೆ ಮೂಲವೇ?

ಆಸೆಯೇ ದುಃಖಕ್ಕೆ ಮೂಲವೇ?

*** ಶೃತಿ ಅರವಿಂದ್

ನನ್ನ ಮಗನಿಗೆ ೫ ವರುಷವಾಗಿದ್ದಾಗ ಒಂದು ಆಟಿಕೆಗಾಗಿ ಬೇಡಿಕೆಯಿಟ್ಟ. ಅದನ್ನು ನಾವು ಕೊಡಿಸಿದೆವು. ಮಾರನೇ ದಿನವಷ್ಟೇ ಅದೇ ಸರಣಿಯಲ್ಲಿಯ ಇನ್ನೊಂದು ಬೊಂಬೆ ಬೇಕೆಂದು ಹಠ ಶುರುವಾಯಿತು. ವಿಷಯ ಮರೆಸುವ ನನ್ನ ಯಾವುದೇ ಮಾಮೂಲಿನ ತಂತ್ರಗಳು ನಿಷ್ಪ್ರಯೋಜಕವಾಗಿ ಸಣ್ಣ ಅಳುಕ ಮುಂದುವರೆಯಿತು.

ಎಲ್ಲ ಆಸೆಗಳನ್ನು ಪೂರೈಸಬೇಕೇ? ಪೂರೈಸಿದಂತೆ ಆಸೆಯ ಬಳ್ಳಿ ಬೆಳೆಯುತ್ತಲೇ ಹೋಗುತ್ತದೆಯೇ? ಯಾರಿಗೆ ದುಃಖ? ಯಾರಿಗೆ ಕೋಪ? ಯಾರಿಗೆ ಮರುಕ? ಮಗುವಿನ ಮನಸ್ಸನ್ನು ನೋಯಿಸದೆ, ವಾದ-ಪ್ರತಿವಾದಗಳಿಗೆ ಎಡೆ ಕೊಡದೆ, ಜೀವನದ ಪಾಠಗಳನ್ನು ಕಲಿಸುವುದು ಹೇಗೆ? "ಸುಳ್ಳು" ತಂದೆ-ತಾಯಿಗಳಿಗೆ ಸಮರ್ಥ ಅಸ್ತ್ರವಾದಿತೇ? ಇಂದಿನ "ಬಿಳಿ ಸುಳ್ಳು" ನಾಳೆ ಮುಳ್ಳು ಆದೀತೆ? ಈ ಪ್ರಶ್ನೆಗಳ ಮೇಲೆ ಅನುಭವದ ವಿಚಾರಗಳನ್ನು ಹಂಚಿಕೊಂಡಿದ್ದಾರೆ ಶೃತಿ ಅರವಿಂದ್.

ಸೆ ದೊಡ್ಡವರಿಗೂ ಇದೆ, ಮಕ್ಕಳಿಗೂ ಇದೆ. ಮನುಷ್ಯನ ಆಸೆಗಳು ಬೇರೆ ಬೇರೆ ಬಗೆಯವು ಇರಬಹುದು, ಅವು ಮುಗ್ಧ ಆಸೆ (ಚಾಕಲೇಟ್ ಬೇಕು, cartoon ನೋಡಬೇಕು); ಉದಾತ್ತ/ಸಾತ್ವಿಕ ಬಯಕೆ (ಹೊಸ ವಿದ್ಯೆ ಕಲಿಯುವುದು, ಹೊಸ ಸಾಹಸಕ್ಕೆ ಕೈ ಹಾಕುವುದು, ಸಮಾಜ ಸೇವೆ, ಆಧ್ಯಾತ್ಮ ಇತ್ಯಾದಿ); ರಾಜಸಿಕ/ಐಷಾರಾಮಿ ಆಸೆ (ದೊಡ್ಡ ಕಾರು, ಬಂಗಲೆ); ದುರಾಸೆ/ತಾಮಸಿಕ ಬಯಕೆ (ಇನ್ನೊಬ್ಬರ ಹಣ, ಇನ್ನೊಬ್ಬರಿಗೆ ತೊಂದರೆ, ಸೇಡು). ನಾವು ಕೊಂಚ ಯೋಚಿಸಿದರೆ, ಯಾವ ಆಸೆ ಯೋಗ್ಯ, ಯಾವುದು ದುರಾಸೆ ಎಂದು ನಮ್ಮ ಅಂತರಂಗಕ್ಕೆ ಸ್ಪಷ್ಟವಾಗಿ ತಿಳಿದೀತು.

ಸಣ್ಣ ಮಕ್ಕಳಿಗೆ ಇರುವುದು ಕೇವಲ ಮೊದಲ ವರ್ಗದ ಆಸೆಗಳು ಮಾತ್ರ, ಅಂದರೆ, ಲೌಕಿಕ ಆದರೂ ಮುಗ್ಧ ನಿಷ್ಕಲ್ಮಶ ಆಸೆಗಳು. ಹೀಗಿದ್ದಾಗ ಮಗುವಿನ ಒಂದು ಆಸೆಯನ್ನು 'ಒಳ್ಳೆಯದು' ಅಥವಾ 'ದುರಾಸೆ' ಎಂದು ವಿಂಗಡಿಸುವುದು ಸರಿಯೇ? ಮಕ್ಕಳು ಸರ್ವ ಕಾಲದಲ್ಲೂ ಆ ಕ್ಷಣದ ಕ್ಷಣಿಕ ಸುಖವನ್ನು ಮಾತ್ರ ಬಯಸುವವರು. ಹೆಚ್ಚು ದೂರದೃಷ್ಟಿ ಇರುವುದಿಲ್ಲ, ನಾವು ಅದನ್ನು ನಿರೀಕ್ಷಿಸಲೂ ಬಾರದು. ಬೆಳೆಯುತ್ತ ಬೆಳೆಯುತ್ತ ದೂರದೃಷ್ಟಿಯೂ ಬೆಳೆಯುತ್ತದೆ. ಅಲ್ಲಿಯ ವರೆಗೂ, ಆಸೆ ತಾನಾಗೇ ಹುಟ್ಟುತ್ತೆ, ಮಗು ಅದನ್ನು ಮುಗ್ದವಾಗಿ ವ್ಯಕ್ತ ಪಡಿಸುತ್ತಾನೆ ಅಷ್ಟೇ. ಆ ಆಸೆ ಫಲಿಸುವುದಿಲ್ಲವಾದರೆ ಅದನ್ನು ವಿವರಿಸುವಾಗ ನಾವು ಸಹಾನುಭೂತಿಯಿಂದ ವಿವರಿಸಬೇಕು. ಕೋಪ, ಅಸಹನೆಯಿಂದ ಅಲ್ಲ.

ನಮ್ಮ ಮನೆಯಲ್ಲಿ ಖರೀದಿಗಳ ಮೇಲೆ ಸ್ವಲ್ಪ ಕಡಿವಾಣ ಇಟ್ಟಿದ್ದೇವೆ. ಏಕೆಂದರೆ ಏನನ್ನೂ ಕೊಳ್ಳುವ ಮುನ್ನ ಅದರ ಬೆಲೆ, ಅಷ್ಟೇ ಅಲ್ಲದೆ, ಅದರ ಗುಣಮಟ್ಟ, ಎಷ್ಟು ದಿನ ಉಪಯೋಗಿಸಲ್ಪಡುತ್ತದೆ, ಅದರ ಶೈಕ್ಷಣಿಕ ಉಪಯೋಗ ಎಷ್ಟು, ಹೆಚ್ಚು ಜಾಗ ಆವರಿಸುತ್ತದೆಯೇ, ಎಂದೆಲ್ಲಾ ಲೆಕ್ಕ ಹಾಕುತ್ತೇವೆ. ಅಲ್ಲದೆ, ನಮ್ಮ ಕೈಲಿ ಆಗುತ್ತದೆ ಎಂಬ ಮಾತ್ರಕ್ಕೆ ಕೇಳಿದಾಗಲೆಲ್ಲ ಕೊಡಿಸುತ್ತಿದ್ದರೆ, ಮಕ್ಕಳಿಗೆ ಹಣದ ಬಗ್ಗೆ ಹಾಗೂ ವಸ್ತುಗಳ ಬಗ್ಗೆ ಗೌರವ ಉಳಿಯುವುದಿಲ್ಲ.

ಅದೃಷ್ಟವಶಾತ್ ನನ್ನ ಮಗ ಹೆಚ್ಚು ಕೇಳುವವನಲ್ಲ, ಆದ್ದರಿಂದ ಜೀವನ ಸದ್ಯಕ್ಕೆ ಸುಗಮವಾಗಿದೆ! ಆಗಾಗ್ಗೆ ನಾವು ಸ್ವಯಂ ಪ್ರೇರಿತವಾಗಿ ಪ್ರೀತಿಯಿಂದ ಏನಾದರೋ ಕೊಡಿಸುವುದುಂಟು.. ಬಹಳ ಸಣ್ಣ ವಯಸ್ಸಿನಲ್ಲೇ ಅವನು ತನಗೆ ಬೇಕಾದ ಎಲ್ಲ ವಸ್ತುಗಳನ್ನೂ ಹೊಂದಲು ಸಾಧ್ಯವಿಲ್ಲ ಎಂದು ಅರ್ಥಮಾಡಿಕೊಂಡಿದ್ದನು. ಹಾಗೆಂದು ಅವನು ತನ್ನ ಆಸೆಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು ಏನೂ ಅಡ್ಡಿಯಿಲ್ಲ, ಮತ್ತು ನನ್ನೊಂದಿಗೆ ಚರ್ಚಿಸಲೂ ಬಹುದು ಎಂದು ಅವನಿಗೆ ಗೊತ್ತಾಗಿತ್ತು. ಆಸೆಪಟ್ಟ ವಸ್ತು ಸಿಗದಿದ್ದರೇನು, ನಾವಿಬ್ಬರೂ ಒಟ್ಟಿಗೆ ಆ ವಸ್ತುವಿನ ಬಗ್ಗೆ ಕನಸು ಕಟ್ಟಬಹುದಲ್ಲವೇ!

ಅಲ್ಲದೆ ಮಕ್ಕಳನ್ನು ಯಾವುದಕ್ಕೂ ಒಪ್ಪಿಸಲು ಅಥವಾ ಪ್ರೋತ್ಸಾಹಿಸಲು ಬಹುಮಾನದ ಆಮಿಷ ಕೊಡುವುದು ಸುಲಭ ಉಪಾಯ ಎನಿಸಿದರೂ ಸಾಧ್ಯವಾದಷ್ಟು ಮಾಡಬಾರದು ಎಂದು ನಂಬಿದ್ದೇವೆ. ತನಗೆ ಕೊಟ್ಟ ಹೊಸ ಆಟಿಕೆ ತಾನು ಸಂಪಾದಿಸಿದ್ದು ಎಂದು ಮಗುವಿಗೆ ಸುಳಿವು ಸಿಕ್ಕಿದರೆ, ಅವನಿಗೆ ಮೇಲುಗೈ ಕೊಟ್ಟ ಹಾಗೆ ಅಲ್ಲವೇ? ಆಗ ತಾನು ಮಾಡಿದ ಪ್ರತಿಯೊಂದು ಸಣ್ಣ ಕೆಲಸಕ್ಕೂ ಬಹುಮಾನ ಸಿಗಬೇಕೆಂದು ಅಪೇಕ್ಷಿಸುವುದಲದೆ, ಅದನ್ನು ತನ್ನ ಜನ್ಮಸಿದ್ಧ ಹಕ್ಕೆಂದೇ ಭಾವಿಸಿ, ಕೇವಲ ಬಹುಮಾನ-ಅಭಿಮುಖವಾಗಿಯೇ ಜೀವನ ಎಂದಾಗಿ, ಸ್ವಂತವಾಗಿ ಒಳ್ಳೆತನ ಬೆಳೆಯದಿದ್ದರೆ..? ಮೂಲತಃ ಒಳ್ಳೆ ಉದ್ದೇಶವಿದ್ದ ಮಗುವೂ ಕೂಡ ಸಂಕುಚಿತವಾಗಿ ಬೆಳೆಯುವ ಸಾಧ್ಯತೆ ಹೆಚ್ಚು. ಆದ್ದರಿಂದ ನಮ್ಮ ಮಗನಿಗೆ ಹೆಚ್ಚು ಬಹುಮಾನ ಪಡೆದೂ ರೂಢಿ ಇಲ್ಲ.

ಇನ್ನೊಂದು ಕಿವಿಮಾತು. ನಾವು 'ಹಾಗೆ ಸುಮ್ಮನೆ', ಖುಷಿಗೆ, 'ತುಂಬಾ ದಿನ ಆಯಿತು' ಅಂತ ಆಟಿಕೆ ತಂದುಕೊಟ್ಟಿದ್ದಾದರೆ, ಹೀಗೆಂದು ಮಗುವಿಗೆ ಎಂದೂ ಬಿಟ್ಟುಕೊಡಬಾರದು. ಇಲ್ಲವಾದರೆ, ತನಗೆ ಏನಾದರೂ ಬೇಕಾದಾಗ "ಈಗ ತುಂಬಾ ದಿನ ಆಯಿತು" ಅಥವಾ "ಸುಮ್ಮನೆ ಖುಶಿಯಾಗಿ ನೀವು" ಎಂದೆಲ್ಲಾ ತರ್ಕ ಮುಂದಿಡುತ್ತಾನೆ. ಆಗ ಏನು ಮಾಡುವುದು.? ಆದ್ದರಿಂದ ನಾವು ಈ ಮುನ್ನೆಚ್ಚರಿಕೆಯನ್ನು ಕೂಡ ವಹಿಸುತ್ತೇವೆ.

ಹೀಗಿರುವಾಗ ನನ್ನ ಮಗನಿಗೆ ೫ ವರುಷವಾಗಿದ್ದಾಗ ಒಂದು ದಿನ ಅಪರೂಪಕ್ಕೆ ಅವನು ಒಂದು ಆಟಿಕೆಗಾಗಿ ಬೇಡಿಕೆಯಿಟ್ಟ. ಅದನ್ನು ನಾವು ಕೊಡಿಸಿದೆವು. ಮಾರನೇ ದಿನವಷ್ಟೇ ಅದೇ ಸರಣಿಯಲ್ಲಿಯ ಇನ್ನೊಂದು ಬೊಂಬೆ ಬೇಕೆಂದು ಹಠ ಶುರುವಾಯಿತು. ಅದಲು-ಬದಲು ಮಾಡುವುದಿಲ್ಲ, ಎರಡೂ ಬೊಂಬೆಗಳೂ ತನಗೇ ಬೇಕೆಂದು ಒರಲತೊಡಗಿದ. ವಿಷಯ ಮರೆಸುವ ನನ್ನ ಯಾವುದೇ ಮಾಮೂಲಿನ ತಂತ್ರಗಳು ನಿಷ್ಪ್ರಯೋಜಕವಾಗಿ ಸಣ್ಣ ಅಳುಕ ಮುಂದುವರೆಯಿತು. ಕೋಪವಲ್ಲ, ಜೋರಲ್ಲ, ದೊಡ್ಡ ಹಠವೇನಲ್ಲ, ಆದರೆ ದೈನ್ಯದ , ಎಡೆಬಿಡದ ದುಃಖ.. ಮರುಕ ಹುಟ್ಟಿಸುವಂಥದ್ದು.

ಇಂಥ ವರ್ತನೆ ಕಂಡರೆ ಪೋಷಕರ ಸಾಮಾನ್ಯ ಪ್ರತಿಕ್ರಿಯೆ ಏನಿರಬಹುದು ನೀವೇ ಊಹಿಸಿಕೊಳ್ಳಿ. "ಮುದ್ದು ಜಾಸ್ತಿಯಾಗಿ ಹುಡುಗ ಹಾಳಾಗಿದ್ದಾನೆ, ಕೊಡಿಸಿದ ವಸ್ತು ಬಗ್ಗೆ ಕೃತಜ್ಞತೆಯಿಲ್ಲ, ಕೇಳಿದ್ದ ತಕ್ಷಣ ಎಲ್ಲಾ ಕೊಡಿಸ್ತೀವಿ ಅಂದುಕೊಂಡಿದ್ದಾನೆ! ದಿನವೆಲ್ಲಾ ತಲೆ ತಿಂತಾನೆ.. ಕೆಟ್ಟ ಹುಡುಗ.." ಹೀಗೆಲ್ಲ ಕೋಪ ಕಾರುತ್ತೇವೆ.

ಈಗ ಒಂದು ನಿಮಿಷ ಆ ಮಗುವಿನ ದೃಷ್ಟಿಯಿಂದ ಯೋಚಿಸಿ ನೋಡಿ.. ತನಗೆ ತುಂಬಾ ಆಸೆ ಇರುವ ವಸ್ತುವು ಈ ಕ್ಷಣಕ್ಕೆ ಕೈಗೆ ಸಿಗುತ್ತಿಲ್ಲ ಎಂಬ ದುಃಖ ಮಾತ್ರ ಅವನಿಗೆ ಗೊತ್ತು. ಏಕೆ ಸಿಗುತ್ತಿಲ್ಲ ಎಂಬ ಕಾರಣ ಮಗುವಿಗೆ ತಿಳಿಯದು. ಆಗ ಅವನಿಗೆ ಅಸಹಾಯಕತೆ ಕಾಡುತ್ತೆ. ನೀವು ಬಯಸಿದ ಹೊಸ ಕಾರು ಅಥವಾ promotion ನಿಮಗೆ ಸಿಗದಿದ್ದಾಗ ಆಗುವ ತಳಮಳ ಹೇಗೋ ಹಾಗೆಯೇ.

ಈಗ ಏನು ಮಾಡುವುದು..

ಸಾಧಾರಣವಾಗಿ ಶಾಂತ ಇರುವ ಒಬ್ಬ ಮಗುವು ಇವತ್ತು ಗಲಾಟೆ ಮಾಡ್ತಿದಾನೆ ಅಂದರೆ ಇದನ್ನು ಅವನ "ನಿಜವಾದ ಬಣ್ಣ" ಎಂದು ತೀರ್ಮಾನಿಸದೆ, "ಇದು ಈ ಒಂದು ದಿನದ ಸಂಗತಿ ಅಷ್ಟೇ" ಎಂದು ಪರಿಗಣಿಸಿದಾಗ, ಇದರಿಂದ ನಮ್ಮ ಮನಸ್ಸಿಗೆ ಸ್ವಲ್ಪ ಸಮಾಧಾನ ಸಿಗುತ್ತದೆ, ಸಂಯಮ ಬರುತ್ತದೆ.ಆದರೆ ಇದು ಪದೇ ಪದೇ ಮೂಡಿಬರುವ ವರ್ತನೆ ಎಂದು ತೋರಿದರೆ, "ಬರುಬರುತ್ತಾ ರಾಯರ ಕುದುರೆ ಕತ್ತೆ ಆಗ್ತಿದೆ" ಎಂದು ತೀರ್ಪು ಕೊಡದೆ, ಒಂದೊಂದನ್ನೂ ಪ್ರತ್ಯೇಕ ಘಟನೆಯೆಂದು ಪರಿಗಣಿಸಿ, ಸದ್ಯಕ್ಕೆ ಪ್ರಸ್ತುತ ಸ್ಥಿತಿಯನ್ನು ಮಾತ್ರ ಎದುರಿಸಿದರೆ ಸಾಕಲ್ಲವೇ. ಮಗುವನ್ನು 'ಕೆಟ್ಟ ಮಗು' ಎಂದು label ಮಾಡಬಾರದು. 'ಸಮಸ್ಯೆ'ಯನ್ನು ಬಗೆಹರಿಸಬೇಕು, ಸಮಸ್ಯೆ ಇರುವ ವ್ಯಕ್ತಿಯ ಮೇಲೆ ಕೋಪ ಕಾರಿ ಪ್ರಯೋಜನವಿಲ್ಲ.

ನನ್ನ ಮಗನ ಮನದಲ್ಲಿ ಒಂದು ಬಲವಾದ ಬಯಕೆ ಹುಟ್ಟಿ ಅದು ಸಿಗದೆ ಹಠ ಮಾಡಿದಾಗ ಅಥವಾ ನಿರಾಶೆ ಆದಾಗ, ನಾನು ಸಾಧಾರಣವಾಗಿ ಅವನ ಗಮನ ಬದಲಾಯಿಸಲು ಮೊದಲು ನಗಿಸುವ ಪ್ರಯತ್ನ ಮಾಡುತ್ತೇನೆ. ಆಟ ಆಡಿಸುವುದು, ಹೊಸದೇನೋ ತೋರಿಸುವುದು, ಯಾವುದಾದರೂ ಮುಖ್ಯ ಕೆಲಸವನ್ನು ಜ್ಞಾಪಿಸುವುದು, ಸ್ನೇಹಿತರೊಂದಿಗೆ ಆಡಲು ಕಳಿಸುವುದು ಹೀಗೆ. ಇದರ ಒಳ ಸಂದೇಶ ಏನೆಂದರೆ "ಅಮ್ಮನಿಗೆ ತಾನು ಆಸೆ ಪಟ್ಟಿದ್ದುದಕ್ಕೆ ಕೋಪ ಇಲ್ಲ, ಬದಲಾಗಿ ಇನ್ನೇನೋ ಬೇರೆ ಆಕರ್ಷಕ ವಸ್ತು ನೀಡುತ್ತಿದ್ದಾಳೆ" ಎನ್ನುವಂತೆ.

ಕೆಲವೊಮ್ಮೆ ಅಪರೂಪಕ್ಕೆ ಈ ತಂತ್ರಗಳು ಪರಿಣಾಮಕಾರಿ ಆಗದಿದ್ದಾಗ, ನಾವು ಅರ್ಥ ಮಾಡಿಕೊಳ್ಳಬೇಕು ಆ ಆಸೆ ಎಂದಿನದಿಕ್ಕಿಂತಲೂ ಬಲವಾಗಿರಬೇಕು ಎಂದು. ಹೀಗಾದಾಗ ಅವನೊಡನೆ ಕುಳಿತು ಎದುರು ಬದುರು ಸ್ಪಷ್ಟವಾಗಿ ಮಾತಾಡಲು ತೀರ್ಮಾನಿಸಿದೆ. ಅವನನ್ನು ಕೂರಿಸಿಕೊಂಡು ಪ್ರೀತಿಯಿಂದ ಕಣ್ಣಲ್ಲಿ ಕಣ್ಣಿಟ್ಟು ನೋಡಿ ಹೇಳಿದೆ, "ಮಗು, ನಾವು ಏಕೆ ಹೋಗ್ತಾ ಬರ್ತಾ ಬೇಕಾದ್ದ ಆಟಸಾಮಾನು ಕೊಡಿಸಕ್ಕೆ ಆಗುಲ್ಲಾ ಗೊತ್ತಾ? ಏಕೆಂದ್ರೆ ಅದಕ್ಕೆ ಹಣ ಬೇಕು. ನಾವು ಏನು ಖರೀದಿಸಬೇಕಾದರೂ ದುಡ್ಡು ಕೊಡಬೇಕು. ಆಹಾರ, ಬಟ್ಟೆ, ಪುಸ್ತಕಗಳು, ಮತ್ತು ನಮಗೆ ಬೇಕಾದ ಎಲ್ಲ ವಸ್ತುಗಳೂ. ನಮ್ಮ ಬಳಿ ಇದ್ದಷ್ಟು ಹಣದಿಂದ ಮೊದಲು ಅತಿ ಅವಶ್ಯಕ ವಸ್ತುಗಳನ್ನು ಖರೀದಿಸಿ, ನಂತರ ಹಣ ಉಳಿದಿದ್ದರೆ ಅದರಲ್ಲಿ ಬಯಸುವ ವಸ್ತುಗಳು ಕೊಳ್ಳಬಹುದು. ನಿನ್ನೆ ನಿನಗೋಸ್ಕರ ಈ ಒಂದು ಆಟಿಕೆ ಕೊಡ್ಸಿದ್ದರಿಂದ ಈಗ ಹೆಚ್ಚು ಹಣ ಉಳಿದಿಲ್ಲ. ಅಪ್ಪನ ಕೈಗೆ ಇನ್ನಷ್ಟು ಹಣ ಬಂದ ತಕ್ಷಣ ನಿನಗೆ ಇನ್ನೊಂದು ಬೋಂಬೆ ಕೊಡಿಸ್ತಾರೆ.. "

ಅವನು ಕೊಂಚ ಯೋಚಿಸಿ, "ಅಪ್ಪನ ಬಳಿ ಇನ್ನಷ್ಟು ಹಣ ಯಾವಾಗ ಇರುತ್ತೆ? ನಾಳೆನಾ?"

ನಾನು: "ನಾಳೆ ಅಲ್ಲ, ಇನ್ನಷ್ಟು ದಿನ ಆಗುತ್ತೆ. ಯಾವಾಗ ಅಂತ ನನಗೆ ಗೊತ್ತಿಲ್ಲ."

ಇನ್ನೂ ಸ್ವಲ್ಪ ಯೋಚಿಸಿ ಅವನ ಮುಖ ಅರಳಿತು: "ಅಮ್ಮ.. ನಿಂಗೆ ಗೊತ್ತಾ, ಇನ್ನೊಂದು ಕಾರಣ ಇದೆ ನಾವು ಬೇಕಾದ್ದೆಲ್ಲಾ ತೊಗೊಳ್ಳಕ್ಕೆ ಆಗುಲ್ಲಾ ಅನ್ನೋದಕ್ಕೆ .. "
ನಾನು: "ಹೌದೇ? ಏನದು?"
ಅವನು: "ಬೇರೆ ಮಕ್ಕಳಿಗೆ ಬೇಜಾರು ಆಗ್ಬಾರ್ದು ಅಂತ!"

ಏನು ಉದಾರತೆ!

ಈ 'ಹಣ'ದ ನೆಪ ಏಕೆ ಅತ್ಯುತ್ತಮ ಎನ್ನುವುದಕ್ಕೆ ಕಾರಣಗಳು ನೋಡಿ:

  • ಇದು ಬಹಳ ನಿರ್ದಿಷ್ಟ, ಸ್ಪಷ್ಟವಾದ ಕಾರಣ. ತರ್ಕದಿಂದ, ವಾದಗಳಿಂದ ಇದನ್ನು ನಿರಾಕರಿಸಲಾಗದು.
  • ನಾವು (ಪೋಷಕರು) ಮಕ್ಕಳ 'ವಿರುದ್ಧ' ಸೆಣಸಾಡುವ ಬದಲು ಮಕ್ಕಳ ಪಕ್ಷದಲ್ಲಿಯೇ ಇದ್ದು 'ಹಣದ ಅಭಾವ'ವೆಂಬ 'ವಿರುದ್ಧ ಪಕ್ಷ'ದೊಂದಿಗೆ ಹೋರಾಡಬಹುದು! ಹೀಗಾಗಿ ನಾವು ಮಕ್ಕಳ ದೃಷ್ಟಿಯಲ್ಲಿ ವಿಶ್ವಾಸಾರ್ಹರೂ, ಹಿತೈಷಿಗಳಾಗಿಯೂ, ನಿಸ್ಸಹಾಯಕರಾಗಿಯೂ ಕಾಣುತ್ತೇವೆ. ಅವರ ಆಸೆ ತೀರದಿದ್ದರೂ ನಮ್ಮ ಮೇಲೆ ಮುನಿಸಿಕೊಳ್ಳಲು ಕಾರಣ ಇರುವುದಿಲ್ಲ.
  • ಹೀಗೆ ಮಾಡಿದಾಗ ಪರಿಸ್ಥಿತಿ ನಿಯಂತ್ರಣ ಪೂರ್ತಿಯಾಗಿ ನಮ್ಮ ಕೈಯಲ್ಲಿ ಇರುತ್ತದೆ. ನಮಗೆ ಮನಸ್ಸು ಬಂದಾಗ ಆಟಿಕೆ ಕೊಡಿಸಬಹುದು, ಹಾಗೂ ಕೊಡಿಸದಿದ್ದಲ್ಲಿ ಹೊಣೆಗಾರಿಕೆಯಿಂದ ಕೂಡ ತಪ್ಪಿಸಿಕೊಳ್ಳಬಹುದು.

ಈ ರೀತಿಯ ಸಮಾಧಾನ ಒಂದು ಪ್ರಾಯದ ವರೆಗೆ ಮಾತ್ರ ಕೆಲಸ ಮಾಡುವುದು. ಸಣ್ಣ ಮಕ್ಕಳಿಗೆ ಸಾಧಾರಣವಾಗಿ ಹಣ, ಬೆಲೆ, ವ್ಯವಹಾರಗಳ ಬಗ್ಗೆ ಹೆಚ್ಚು ಗೊತ್ತಿರಲಿಕ್ಕಿಲ್ಲ. ಸ್ವಲ್ಪ ದೊಡ್ಡವನಾಗಿ ಈ ತಿಳುವಳಿಕೆ ಬರುವಷ್ಟರಲ್ಲಿ ಅದಕ್ಕೆ ತಕ್ಕ ವಿವೇಚನೆಯೂ ಬಂದಿದ್ದು, ಆಗ ನನ್ನ ತರ್ಕವನ್ನು ಅರ್ಥ ಮಾಡಿಕೊಳ್ಳುವ ವಯಸ್ಸು ಬಂದಾಗ ನಿಜವಾಗಿ ನನಗೆ ಅನಿಸಿದ್ದುದನ್ನು ವಿವರಿಸಬಹುದು ಅಂದುಕೊಂಡಿದ್ದೇನೆ. "ಸುಳ್ಳು ಹೇಳಿ ಮೋಸ ಮಾಡುತ್ತಿದ್ದೆವಲ್ಲಾ.. " ಎಂದು ವ್ಯಥೆ ಪಡಬೇಡಿ. ಇದರಿಂದ ಯಾರಿಗೂ ಕೇಡಿಲ್ಲ. ಮನೆಯಲ್ಲಿ ಎಲ್ಲ ಹಿರಿಯರೂ ಒಮ್ಮತದಿಂದ ಒಪ್ಪಿ ಈ ತೋರಿಕೆಯನ್ನು ನಡೆಸಿಕೊಂಡು ಹೋದರೆ ಸಾಕು. ಮಗುವಿಗೆ ನಿಜವಾದ ಉದ್ದೇಶಗಳ ತಿಳಿವಳಿಕೆ ಬರುವ ತನಕ ಮಾತ್ರ.

ಸರಿ.. ಇಷ್ಟೆಲ್ಲಾ ಅಸ್ತ್ರಗಳೊಂದಿಗೆ ತಯಾರಾಗಿದ್ದ ನನಗೆ, ಆ ದಿನ ನನ್ನ ಮಗನಿಗೆ ಸಮಾಧಾನ ಪಡಿಸಲು ಈ ಯಾವುವೂ ನಿಷ್ಪ್ರಯೋಜಕವಾದವು. ಮಧ್ಯೆ ಮಧ್ಯೆ ನೆನಪಿಸಿಕೊಂಡು ದುಃಖ ಮರಳುತ್ತಿತ್ತು. ಮಲಗುವ ಹೊತ್ತಿಗೆ ಅವನ ದೈನ್ಯ ಸ್ಥಿತಿ ನೋಡಲಾಗದಾಯಿತು. ಆದರೂ ನನ್ನ ಮೇಲೆ ಮುನಿಸು ತೋರಲು ಮನಸ್ಸಿರಲಿಲ್ಲ ಅವನಿಗೆ. ಕೊನೆಗೆ ನಾನು ನನ್ನ ಬತ್ತಳಿಕೆಯಲ್ಲಿ ಹುಡುಕಾಡಿ ಇನ್ನೊಂದು ಅಸ್ತ್ರ ತೆಗೆದೆ. "Sesame street" ಎಂಬ ಒಂದು ಸರಣಿಯಲ್ಲಿ ಬರುವ "Cookie monster" ಒಮ್ಮೆ ಹೇಳಿದ್ದು ನೆನಪು ಮಾಡಿದೆ "Me want cookie, but me wait!" ಅಂದರೆ "ನನಗೆ ಆ ತಿಂಡಿ ಬೇಕು ಆದರೆ ನಾನು ಕಾಯುತ್ತೇನೆ". ಇದನ್ನು ಕೇಳಿ ನನ್ನ ಮಗ ಸ್ವಲ್ಪ ಶಾಂತವಾಗಿ ಯೋಚಿಸಿ ಕೊನೆಗೆ ಹೇಳಿದ "ನನಗೆ ಆಟಿಕೆ ಬೇಕು, ಆದರೆ ನಾನು ಇನ್ನೂ ಹಣ ಸಿಗುವ ವರೆಗೆ ಕಾಯುತ್ತೇನೆ!" ಅಬ್ಬ! ಈಗ ಅವನ ಮುಖದಲ್ಲಿ ಮಂದಹಾಸ ಮೂಡಿತ್ತು. ನನಗೂ ಸಮಾಧಾನ ಆಯಿತು.

ಅಂದು ರಾತ್ರಿಯ ಎಂದಿನ ಪ್ರಾರ್ಥನೆಗಳೊಂದಿಗೆ ಒಂದು ಸಾಲು ಸೇರಿಸಿದ. "ದೇವರೇ, ಬೇರೆ ಯಾವ ಮಕ್ಕಳೂ ಆ ಆಟಿಕೆಯನ್ನು ಬಯಸದಿರಲಿ" (ಅಂದರೆ, ನಾವು ಕೊಳ್ಳುವ ವರೆಗೂ ಅದು ಅಂಗಡಿಯಲ್ಲಿ ಖರ್ಚಾಗಿ ಹೋಗದಿರಲಿ ಎಂದು). ಒಂದು ನಿಮಿಷ ಬಿಟ್ಟು ಇನ್ನೊಂದು ವಾಕ್ಯ ಸೇರಿಸಿದ "... ಬಯಸಿದರೂ ಅವರ ಬಳಿ ಈಗಾಗಲೇ ಅಂಥದ್ದೇ ಒಂದು ಇರಲಿ!" ಇಷ್ಟು ಹೇಳಿ ಅವನು ನೆಮ್ಮದಿಯಿಂದ ಮಲಗಿದ

___________________
ತಾಗುಲಿ : Shruthi Aravind, greed, sorrow