ಅನ್ಯಾಯಕಾರಿ ಬ್ರಹ್ಮನ ಆಖ್ಯಾನ

[ಮಳವಳ್ಳಿ ಮ್ಹಾದೇವಸ್ವಾಮಿಯವರ, ಸುಮಾರು ಮೂರು ದಶಕಗಳ ಹಿಂದೆಯೆ ರೆಕಾರ್ಡ ಮಾಡಿದ, ಮಹಾಭಾರತ ಆಧಾರಿತ, ಕಂಸಾಳೆ ಶೈಲಿಯ ಜಾನಪದ ಹಾಡೊಂದು ಇಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿ ಹರಿದಾಡುತ್ತಿದೆ.  ಈ ಹಾಡಿನ ಹಿನ್ನೆಲೆ ಏನು? ಅದರಲ್ಲಿನ “ಅನ್ಯಾಯಕಾರಿ ಬ್ರಹ್ಮ ಈ ಸುಂದರನ ಸನ್ಯಾಸಿ ಮಾಡಬಹುದೇ” ಎನ್ನುವ ಒಂದೇ ಒಂದು ಸಾಲಿನಿಂದ ಇಂದಿನ ಯುವಕರ ಮನ ತಟ್ಟಲು ಏನು ಕಾರಣ? ಬದಲಾದ ಭಾರತದ ಸಾಮಾಜಿಕ ಪರಿಸ್ಥಿತಿಯೆ?  ಸುಧಾರಿಸಿದ ಆರ್ಥಿಕ ಸ್ಥಿತಿಯೆ? ಹೆಣ್ಣು ಮಕ್ಕಳು ವಿದ್ಯಾವಂತರಾಗಿ ಸ್ವಂತಿಕೆಯನ್ನು ಗಳಿಸಿದ್ದೆ? ಕ್ಷೀಣವಾದ ಪುರುಷಪ್ರಾಧಾನ್ಯತೆಯೆ? ಬದಲಿಸಲು ಕಠಿನವಾದ ಮನೋಸ್ಥಿತಿಯೆ? ಸಮಾಜದ ಒಳ್ಳೆಯ ಬೆಳವಣಿಗೆಗಳ ಜೊತೆಗೆ ಅನಿರೀಕ್ಷಿತ ದುಷ್ಪರಿಣಾಮಗಳೂ ಉಂಟೆ? ಈ ಪುರಾಣ-ವೈರಾಣದಲ್ಲಿ ಹೈರಾಣಾದವರು ಯಾರು? ಇವೆಲ್ಲವನ್ನೂ ತಮ್ಮ ಹರಿತ ಲೇಖನಿಯಿಂದ ಇಲ್ಲಿ ವಿಶ್ಲೇಷಿಸಿದ್ದಾರೆ ಸಂಜಯ ಹಾವನೂರ. -- ಸಂ]

ಅನ್ಯಾಯಕಾರಿ ಬ್ರಹ್ಮನ ಆಖ್ಯಾನ

ಸಂಜಯ ಹಾವನೂರ

ಕರ್ನಾಟಕದ ವಿದ್ಯಮಾನಗಳ ಕುರಿತು ಅಂತರ್ಜಾಲದ ಮೂಲಕ ಗಮನವಿಟ್ಟಿರುವವರಿಗೆಲ್ಲ ಕಳೆದ ಹಲವು ತಿಂಗಳುಗಳಲ್ಲಿ ಅನ್ಯಾಯಕಾರಿ ಬ್ರಹ್ಮನ ಪರಿಚಯ ಸಾಕಷ್ಟು ಆಗಿರಬೇಕು. ಮಳವಳ್ಳಿ ಮ್ಹಾದೇವಸ್ವಾಮಿಯವರು ಹಾಡಿದ ಈ ಕಂಸಾಳೆ ಕಥಾನಕ ವರ್ಷದ ಮಧ್ಯದಲ್ಲಿ ದಿಢೀರೆಂದು ವೈರಲ್‌, ಅರ್ಥಾತ್‌ ವೈರಾಣವಾಗಿದೆ[೧,೨]. ಯೂಟ್ಯೂಬಿನಲ್ಲಿ ಅದರ ಹಲವು ಆವೃತ್ತಿಗಳಿವೆ, ಇನ್ನೂ ಬರುತ್ತಲೇ ಇವೆ. ಹಳ್ಳಿಯ ಹಿರಿಯರಿಂದ ಹಿಡಿದು ಹಾಸ್ಟೆಲ್‌ ಹುಡುಗಿಯರು ಹಾಡಿಗೆ ಹೆಜ್ಜೆ ಹಾಕಿದ್ದಾರೆ, ಶಾಲಾ ಬಾಲಕಿಯರು ಪುಟ್ಟ ತಮ್ಮಂದಿರಿಗೆ ಪಟ್ಟೆ ಪೀತಾಂಬರ ತೊಡಿಸಿ ಸುತ್ತ ಕುಣಿದಿದ್ದಾರೆ. ಕ್ಷೌರ ಕಾಣದ ಯುವಕರು ಅದರ ತಾಳಕ್ಕೆ ಪೃಷ್ಠಭ್ರಮಣದ ಪ್ರದರ್ಶನಗಳನ್ನು ನೀಡಿದ್ದಾರೆ. ಏನಿದರ ಹಿನ್ನೆಲೆ?

ಹಿನ್ನೆಲೆ: ಪುರಾಣ-ಜಾನಪದ
ಮಹಾಭಾರತದಲ್ಲಿ ಅರ್ಜುನನು ಏಕಾಂಗಿಯಾಗಿ ೧೨ ವರ್ಷ ವನವಾಸ ಮಾಡಿದ ಆಖ್ಯಾನವಿದೆ. ಧರ್ಮರಾಜ, ದ್ರೌಪದಿಯರ ಏಕಾಂತವನ್ನು ಅನಿವಾರ್ಯ ಕಾರಣಗಳಿಗೆ ಭಂಗ ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತವೆಂದು. ವನವಾಸ ಅಂಥ ಕಷ್ಟಕರವೇನೂ ಆಗಲಿಲ್ಲ. ಅಜ್ಞಾತವಾಸದಂತೆ ತಲೆಮರೆಸಿಕೊಳ್ಳುವ ನಿಯಮವಿರಲಿಲ್ಲ, ಸನ್ಯಾಸಿಯಾಗಿ ನಿಷ್ಠುರ ಜೀವನ ನಡೆಸಬೇಕಿರಲಿಲ್ಲ. ಹಸ್ತಿನಾಪುರದಿಂದ ದೂರ ಎಲ್ಲಿಯಾದರೂ ರಾಜಾರೋಷವಾಗಿ ರಾಜಕುಮಾರನಂತೆ ಇರಬಹುದಿತ್ತು. ಅರ್ಜುನನು ಮಾಡಿದ್ದೂ ಅಷ್ಟೇ. ಹಸ್ತಿನಾಪುರದಿಂದ ಮೊದಲಿಗೆ ಮಣಿಪುರಕ್ಕೆ ಹೋಗಿ ಉಲೂಪಿ, ಚಿತ್ರಾಂಗದಾ ಎಂಬ ರಾಜಕುವರಿಯರನ್ನು ಮದುವೆಯಾಗುತ್ತಾನೆ. ಹಾಗೆಯೇ ವಾಪಸ್‌ ಬರುವಾಗ ದಾರಿಯಲ್ಲಿ ದ್ವಾರಕಾ ನಗರಿಯಲ್ಲೂ ಕೆಲವು ದಿನ ಇದ್ದು ಶ್ರೀಕೃಷ್ಣನ ತಂಗಿ ಸುಭದ್ರೆಯನ್ನು ಅಪಹರಿಸಿ ಅವಳನ್ನೂ ಮದುವೆಯಾಗುತ್ತಾನೆ. ಒಟ್ಟಿನಲ್ಲಿ ವನವಾಸವನ್ನು ಅರ್ಜುನ ಮೂರು ಹೊಸ ಹೆಂಡಿರ ಸಂಗದಲ್ಲಿ ಆನಂದವಾಗಿಯೇ ಕಳೆದನೆನ್ನಬೇಕು ಸನ್ಯಾಸಿಯಾಗದಿದ್ದರೂ ಅವನು, ಸೌಭದ್ರಾಪಹರಣದ ನಾಟಕಕ್ಕಾಗಿ ಜೋಗಿಯ ವೇಷ ಧರಿಸಿದನೆಂಬ ಪ್ರತೀತಿ ಇದೆ. ಅರ್ಜುನ ಸನ್ಯಾಸಿಯ ಹಲವಾರು ಆಖ್ಯಾನಗಳು ನಾಟಕ, ಜಾನಪದ ಕಥಾನಕಗಳಲ್ಲಿ ಪ್ರಚಲಿತವಾಗಿವೆ.

೧೯ನೆಯ ಶತಮಾನದಲ್ಲಿ ಅರ್ಜುನನ ಜೋಗಿ ಪದ ಎಂಬ ಜಾನಪದ ಕಥಾ ಪ್ರಸಂಗ ಮೈಸೂರಿನಲ್ಲಿ ಪ್ರಚಲಿತವಾಯಿತು. ಅದರ ಲೇಖಕರು ಯಾರೆಂದು ಸ್ಪಷ್ಟವಿಲ್ಲ. ಮೈಸೂರು ಮಹಾರಾಜರ ಆಸ್ಥಾನದಲ್ಲಿದ್ದರೆಂದು ಹೇಳುತ್ತಾರೆ. ನೂರೈವತ್ತು ವರ್ಷಗಳಲ್ಲಿ ಹಲವಾರು ಜಾನಪದ ಕಲಾವಿದರು ಅದನ್ನು ಹಾಡಿ ಜನಪ್ರಿಯಗೊಳಿಸಿದ್ದಾರೆ. ಸುಮಾರು ೨೮ ವರ್ಷಗಳ ಹಿಂದೆ ಮಳವಳ್ಳಿ ಮ್ಹಾದೇವಸ್ವಾಮಿಯವರು ಅರ್ಜುನನ ಜೋಗಿ ಪದವನ್ನು ತಮ್ಮದೇ ಆದ ವಿಶಿಷ್ಟ ಕಂಸಾಳೆ ಶೈಲಿಯಲ್ಲಿ ಧ್ವನಿ ಮುದ್ರಿಸಿದರು. ನಾಲ್ಕು ತಾಸಿನ ನಿರೂಪಣೆಯಲ್ಲಿ ಅರ್ಧದಷ್ಟು ಹಾಡುಗಳೇ ತುಂಬಿವೆ. ಜೋಗಿ ಪದದ ಇತರ ಆವೃತ್ತಿಗಳು ಬಂದಿವೆಯಾದರೂ  ಮ್ಹಾದೇವಸ್ವಾಮಿಯವರ ಲಯದ ಮಾಯೆ ಅವುಗಳಲ್ಲಿಲ್ಲ. ಕಂಸಾಳೆ ಮತ್ತು ಇತರ ಜಾನಪದ ಪರಂಪರೆಗಳಲ್ಲಿಯ ಅವರ ಸಾಧನೆಗಾಗಿ ಕಳೆದ ವರ್ಷ ಮೈಸೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್‌ ಪ್ರಶಸ್ತಿ ಸಂದಿದೆ. ೨೦೧೮ರಲ್ಲಿ ಅರ್ಜುನನ ಜೋಗಿ ಪದ ನಾಲ್ಕು ಸೀಡಿಗಳಲ್ಲಿ ಬಿಡುಗಡೆಯಾದಾಗ ಅವರೇ ತಮ್ಮ ಯೂಟ್ಯೂಬಿನ ಚಾನೆಲ್ಲಿನಲ್ಲಿ ಹಾಕಿಕೊಂಡಿದ್ದರು. ಮೊದಲ ೫ ವರ್ಷಗಳಲ್ಲಿ ಅದಕ್ಕೆ ವಿಶೇಷ ಗಮನವೇನೂ ಸಿಕ್ಕಿರಲಿಲ್ಲ. ಈಗ ಇದ್ದಕ್ಕಿದ್ದಂತೆ ಕೆಲವೇ ತಿಂಗಳಲ್ಲಿ ೧೫ ಲಕ್ಷ ಜನ ಅದನ್ನು ನೋಡಿದ್ದಾರೆ.

ಮ್ಹಾದೇವಸ್ವಾಮಿಯವರ ಜೋಗಿ
ಅರ್ಜುನನು ಸನ್ಯಾಸಿಯ ವೇಷ ಧರಿಸಿದ್ದನ್ನು ಬಿಟ್ಟರೆ ಮ್ಹಾದೇವಸ್ವಾಮಿಯವರ ಜೋಗಿ ಪದಕ್ಕೂ ಮಹಾಭಾರತಕ್ಕೂ ಹೆಚ್ಚು ಸಂಬಂಧವಿಲ್ಲ. ಅದರ ನಿರೂಪಣೆ ಹೆಚ್ಚಾಗಿ ಮಂಡ್ಯದ ಗ್ರಾಮೀಣ ಭಾಷೆಯಲ್ಲಿದೆ. ಅಕಾರ, ಹಕಾರ, ಅಲ್ಪಪ್ರಾಣ ಮಹಾಪ್ರಾಣಗಳನ್ನು ಸ್ವಚ್ಛಂದವಾಗಿ ಕಲಸಿ ಮಾಡಿದ ಚಿತ್ರಾನ್ನ. "ಹರ್ಜುನನು ಹೀಂತಾ ಸುಂಧರನು .." ಎಂಬ ಧಾಟಿಯ ಕನ್ನಡ. ಕೆಲವೊಂದು ಕಡೆ ಔಚಿತ್ಯ ಮೀರಿದ ರಸವಂತಿಕೆ ಇದ್ದರೆ ಇನ್ನೂ ಕೆಲವೆಡೆ ಭೀಭತ್ಸ ಎನ್ನಬಹುದಾದ ವರ್ಣನೆಗಳು. ಅರ್ಜುನನ ರೂಪದ ವರ್ಣನೆಯಲ್ಲಿ ಕ್ಷಾತ್ರಕ್ಕಿಂತ ಲಾವಣ್ಯವೇ ಪ್ರಧಾನ. ಮುಖಚಂದ್ರದ ಮಾಟ, ಚೆಂದುಟಿಗಳು, ಕುಡಿಹುಬ್ಬಿನ ಎಸಳುಗಳು, ದಾಳಿಂಬೆ ಬೀಜದಂತಾ ಹಲ್ಲುಸಾಲುಗಳನ್ನು ಕೇಳುವಾಗ ಇದು ಗಾಂಡೀವಧಾರಿ ವೀರ ಪಾರ್ಥನಲ್ಲ, ಯಾರೋ ಹದಿ ಹರೆಯದ ಚೆಲುವೆಯೆಂದೇ ಭಾಸವಾಗಬೇಕು. ಸನ್ನಿವೇಶಗಳೂ ಅಷ್ಟೇ, ಮಹಾಭಾರತ ಸೇರಿದಂತೆ ಯಾವ ಪುರಾಣದಲ್ಲೂ ಸಿಗುವುದಿಲ್ಲ. ಅರ್ಜುನ ಜೋಗಿ ಊರಿನ ಎಲ್ಲ ವಸತಿಗಳಲ್ಲಿ ಯಾತ್ರೆ ಮಾಡುತ್ತಾನೆ, ಎಲ್ಲೆಲ್ಲಿಯೂ ಅವನ ರೂಪಲಾವಣ್ಯಗಳಿಗೆ ಮರುಳಾದ ಜನ ಅವನ ಹಿಂದೆ ಬೀಳುತ್ತಾರೆ. ಅವರನ್ನು ತಿರಸ್ಕರಿಸುವುದು ಮಾತ್ರವಲ್ಲ, ಅಲ್ಲಲ್ಲಿ ಶಾಪಗಳನ್ನು ದಯಪಾಲಿಸಿ ಮುಂದೆ ಹೋಗುತ್ತಾನೆ. ಮೊದಲಿಗೆ ಬ್ರಾಹ್ಮಣರ ಅಗ್ರಹಾರಕ್ಕೆ ಹೋದಾಗ ಅವರೆಲ್ಲ, ನಮ್ಮೆದುರಿಗೆ ಹಾಡಿ ಒಂದು ಸಲ ಕುಣಿದು ಹೋಗು ಎಂದು ಒತ್ತಾಯ ಮಾಡುತ್ತಾರೆ. "ನೀವು ಯಾರಿಗೂ ಕೈಯೆತ್ತಿ ಒಂದು ಕಾಸನ್ನೂ ಕೊಟ್ಟವರಲ್ಲ. ನೀವುಗಳು ಸತ್ತ ಹತ್ತು ದಿನಕ್ಕೆ ನಿಮ್ಮ ಹೆಂಡಂದಿರ ಮಂಡೆ ಬೋಳಾಗಲಿ" ಎಂದು ಬೈದು ಹೋಗುತ್ತಾನೆ. ಅಲ್ಲಿಂದ ವೈಶ್ಯರ ಬೀದಿಗೆ. ಅವರೆಲ್ಲ ತೆಲುಗು ಮಾತನಾಡುವವರು. ಇಲ್ಲಿಯ ನಿರೂಪಣೆಯೂ ತೆಲುಗಿನಲ್ಲಿಯೇ ಬರುತ್ತದೆ. ಅವರ ಹೆಂಗಸರ ಒಂದೊಂದು ಅಂಗಾಂಗಳ ವಿವರವಾದ, ಮತ್ತು ಅಷ್ಟೇ ವಿಕಾರವಾದ ವರ್ಣನೆ ಕೇಳಬಹುದು. ಮುಂದೆ ಮುಸ್ಲಿಮರ ಮೊಹಲ್ಲಕ್ಕೆ ಬಂದ ಅರ್ಜುನನ ಬಗ್ಗೆ ಅಲ್ಲಿಯ ಬೂವಿಗಳು, ಅಂದರೆ ಮುಸ್ಲಿಮ್‌ ಹೆಂಗಸರು, ಮಾತನಾಡುವುದು ಉರ್ದು ಭಾಷೆಯಲ್ಲಿ! "ಸುಲ್ತಾನಬೀ ಜಲ್ದಿ ಆವ್‌ಕೋ ಜೋಗೀ ಕಾ ತಮಾಸಾ ದೇಖೋ" ಹೀಗೆ ಎಲ್ಲ ಕೋಮುಗಳವರಿಗೂ ಹುಚ್ಚು ಹಿಡಿಸಿದ ಅರ್ಜುನ ಕೊನೆಯಲ್ಲಿ ಧರ್ಮಸ್ಥಳ, ಆದಿ ಚುಂಚನಗಿರಿಗಳೂ ಸೇರಿದಂತೆ ಎಲ್ಲ ಪುಣ್ಯಕ್ಷೇತ್ರಗಳ ದರ್ಶನ ಮಾಡಿಕೊಂಡು ಹಸ್ತಿನಾಪುರಕ್ಕೆ ಮರಳಿ ಹೋಗುತ್ತಾನೆ.
ನಗರ ಪರ್ಯಟನದ ನಡುವೆ ಅರ್ಜುನ ವೇಶ್ಯೆಯರ ವಠಾರಕ್ಕೂ ಬರುತ್ತಾನೆ. ಮ್ಹಾದೇವಸ್ವಾಮಿಯವರು ಹೇಳುವಂತೆ ವೈಶ್ಯರ ಬೀದಿಯಿಂದ ವೇಶ್ಯೆಯರ ಬೀದಿಗೆ. ಆದರೆ ಇವರು ಅಂಥಿಂಥ ವೇಶ್ಯೆಯರಲ್ಲ. ಚಂದುಳ್ಳಿ ಚೆಲುವೆಯರು. ನಮ್ಮ ಸಿನಿಮಾ ತಾರೆಯರಂತೆ ಚೂಸಿಯರು. ಬಂದವರನ್ನೆಲ್ಲ ಹಾಸಿಗೆಗೆ ಸೇರಿಸುವವರಲ್ಲ, ತಮಗಿಷ್ಟವಾದ, ಸುಂದರ ಶ್ರೀಮಂತರ ಸಂಗವನ್ನು ಮಾತ್ರ ಮಾಡುವವರು. ಆದರೆ ಅರ್ಜುನನ ರೂಪ ಅವರಿಗೂ ಹುಚ್ಚು ಹಿಡಿಸುತ್ತದೆ. ಜೋಗಿಗೆ ಮರುಳಾಗಿ ಅವರೆಲ್ಲ, ಉಟ್ಟ ಬಟ್ಟೆಗಳ ಪರಿವೆ ಇಲ್ಲದೇ ಅವನ ಬೆನ್ನತ್ತಿ ಬರುತ್ತಾರೆ. ಒಂದು ರಾತ್ರಿ ನಮ್ಮೊಡನೆ ಕಳೆದರೆ ಒಬ್ಬೊಬ್ಬರೂ ಒಂದು ಲಕ್ಷ ಕೊಡುತ್ತೇವೆ ಎನ್ನುತ್ತಾರೆ. ವಾರಾಂಗನೆಯರ ಕಾಮೋದ್ರೇಕದ ರಸವತ್ತಾದ ವರ್ಣನೆಗಳ ನಡುವೆ ಅನ್ಯಾಯಕಾರಿ ಬ್ರಹ್ಮನ ಪೂರ್ತಿ ಪಾಠವೂ ಇಲ್ಲಿ ಬರುತ್ತದೆ. ಬೇಸತ್ತ ಅರ್ಜುನನು ನಿಮಗೆಲ್ಲ ಗುಹ್ಯ ರೋಗಗಳು ಬರಲಿ ಎಂದು ಶಾಪವಿತ್ತು ಹೋಗುತ್ತಾನೆ.

ಪುರಾಣ – ವೈರಾಣ : ಕಾರಣ
ಈ ವಿಕೃತ ಪುರಾಣಕ್ಕೂ ಹಾಡಿನ ವೈರಾಣಕ್ಕೂ ಏನು ಸಂಬಂಧ? ಯಾವ ಸಂಬಂಧವೂ ಇಲ್ಲ! ನಿಜವಾದ ಕಾರಣ, ಇತ್ತೀಚೆಗೆ ಬದಲಾಗಿರುವ ನಮ್ಮ ಸಾಮಾಜಿಕ ಸ್ಥಿತಿಯಲ್ಲಿದೆ. ಸಾವಿರಾರು ವರ್ಷಗಳಿಂದ ಭಾರತದ ಎಲ್ಲ ಪ್ರಾಂತಗಳಂತೆ ಕರ್ನಾಟಕವೂ ಪುರುಷ ಪ್ರಧಾನ ಸಮಾಜವಾಗಿದೆ. ಅದು ಎದ್ದು ಕಾಣುವುದು ಮದುವೆಯ ಸಂದರ್ಭಗಳಲ್ಲಿ. ಕನ್ಯಾ ಪ್ರದರ್ಶನದ ಪರೇಡಿನಿಂದ ಆರಂಭಿಸಿ ವಧುವಾಗಿ ಅವಳನ್ನು ಬರಮಾಡಿಕೊಳ್ಳುವ ವರೆಗೆ ಎಲ್ಲ ಬಗೆಯ ಬೇಕು ಬೇಡಗಳನ್ನು ಹಕ್ಕಿನಿಂದ ಮಂಡಿಸಿ ಪಡೆದುಕೊಳ್ಳುವುದು ವರಪಕ್ಷದವರ ಪರಿಪಾಠವಾಗಿತ್ತು. ಕಳೆದ ೫೦ ವರ್ಷಗಳಲ್ಲಿ ಇದ್ದಕ್ಕಿದಂತೆ ಅದು ಬದಲಾಗಿದೆ. “ಹೇಗಾದರೂ ಇವಳದೊಂದು ಮದುವೆಯಾದರೆ ಸಾಕು” ಎನ್ನುವುದರ ಬದಲಿಗೆ ತಮ್ಮ ಹೆಣ್ಣು ಮಕ್ಕಳ ಆರ್ಥಿಕ ಸುಭದ್ರತೆ ಸುಖಜೀವನಕ್ಕೆ ತಂದೆ ತಾಯಿಗಳು ಒತ್ತು ಕೊಡುತ್ತಿದ್ದಾರೆ. ವರ ನೌಕರಿ ಮಾಡುತ್ತಿದ್ದಾನೆ, ಇಷ್ಟು ಸಂಬಳ ಬರುತ್ತದೆ ಎನ್ನುವುದಕ್ಕೆ ಚೌಕಶಿ ಮುಗಿಯುವುದಿಲ್ಲ. ಅವನ ಕಾಂಪೆನ್ಸೇಶನ್‌ ಪ್ಯಾಕೇಜಿನ ಪೂರ್ತಿ ವಿವರಗಳನ್ನು ಕೇಳುತ್ತಾರೆ. ಅವಿಭಕ್ತ ಕುಟುಂಬ, ತುಂಬಿದ ಮನೆಗಳಿಗಿದ್ದ ಪಾವಿತ್ರ್ಯ ಈಗ ಉಳಿದಿಲ್ಲ. ಬದಲಿಗೆ ವರನ ತಂದೆ ತಾಯಿ ಸೋದರಿಯರಿಗೆ ಹೆಚ್ಚುವರಿ ಫರ್ನೀಚರ್‌ ಎಂಬ ಅಡ್ಡ ಹೆಸರು ಬಂದಿದೆ.

 ಕನ್ಯೆಯರೂ ಅಷ್ಟೇ. ಮದುವೆಯೊಂದೇ ಮಹತ್ವದ್ದು ಎಂಬ ಮನೋಧರ್ಮವಿರಲಿ, ಅದರ ಅಗತ್ಯವನ್ನೂ ಅವರು ಮರುಯೋಚಿಸುತ್ತಿದ್ದಾರೆ. ಮಗ, ಮಗಳು ಎಂದು ಭೇದಭಾವ ಮಾಡದೇ ಪಾಲಕರು ಎಲ್ಲ ಮಕ್ಕಳಿಗೂ ಸಮಾನ ಶಿಕ್ಷಣಾವಕಾಶ ನೀಡುವುದು ಇವತ್ತಿನ ಸಂಸ್ಕಾರ. ಉನ್ನತ, ವೃತ್ತಿಪರ ಶಿಕ್ಷಣ ಪಡೆದ ಮಹಿಳೆಯರ ಆದ್ಯತೆ ಸಹಜವಾಗಿಯೇ ತಮ್ಮ ವೃತ್ತಿಯ ಕಡೆಗೆ. “ಪಾಕ ಪರಿಣಿತೆ, ಮನೆಗೆಲಸದಲ್ಲಿ ಚುರುಕು, ಹೊರಗೆ ದುಡಿಯಲಿಕ್ಕೂ ತಯಾರು” ಎಂಬ ಎರಡನೇ ದರ್ಜೆಯ ಚೌಕಟ್ಟು ಅವರಿಗೆ ಸಮ್ಮತವಿಲ್ಲ. ಸಾರ್ವಜನಿಕ ಸ್ವಯಂವರಗಳಿಗೆ ಬರುವ ಭಾವೀ ವಧುಗಳು ಆರಂಭದಲ್ಲಿಯೇ “ತಪ್ಪು ತಿಳಿಯಬೇಡಿ. ನಿಮ್ಮನ್ನಾಗಲೀ ಬೇರೆ ಯಾರನ್ನೇ ಆಗಲಿ ಮದುವೆಯಾಗುವ ವಿಚಾರ ನನಗಿಲ್ಲ. ತಂದೆ ತಾಯಿಯರ ಒತ್ತಾಯಕ್ಕೆ ಇಲ್ಲಿ ಬಂದಿದ್ದೇನೆ. ಇವರ ನಿಯಮಗಳ ಪ್ರಕಾರ ನಾವಿಬ್ಬರೂ ಅರ್ಧ ಗಂಟೆ ಒಟ್ಟಿಗೆ ಕಳೆಯಬೇಕು. ಬೇರೇನಾದರೂ ಇದ್ದರೆ ಮಾತಾಡೋಣ. ಆಮೇಲೆ ನಮ್ಮ ಹೊಂದಾಣಿಕೆ ಆಗಲಿಲ್ಲ ಎಂದು ಹೇಳಿಬಿಡಿ” ಎನ್ನುವುದು ಅನೇಕ ಕಡೆ ವರದಿಯಾಗಿದೆ. 
ಬದಲಾವಣೆಯ ಪರಿಣಾಮಗಳು ನಗರಗಳಿಗಿಂತ ಹಳ್ಳಿಗಳಲ್ಲಿ ವಿಪರೀತವಾಗಿ ಎದ್ದು ಕಾಣುತ್ತಿವೆ. ತಮ್ಮ ಮಗಳು ಆರ್ಥಿಕವಾಗಿ ಸುರಕ್ಷಿತವಾಗಿರಬೇಕು ಎಂಬ ಕಾಳಜಿ ತಂದೆತಾಯಿಗಳಿಗಿರುವುದು ಸಹಜ. ಆದರೆ ಅದರ ಅಂಗವಾಗಿ ಈಗ ಹಳ್ಳಿಗಳಲ್ಲಿ ಇರುವವರಿಗೆ, ರೈತರಿಗೆ ಮಗಳನ್ನು ಕೊಡಲೇ ಬಾರದು ಎಂಬ ಅಲಿಖಿತ ನಿಯಮ ಜಾರಿಯಾಗಿದೆ. ಯುವಕರ ಹತಾಶೆಗೆ ಕಾರಣವಾಗಿದೆ. ಹಳ್ಳಿಯಲ್ಲಿ ಬೆಳೆದು ಶಿಕ್ಷಣ ಪಡೆದ ಯುವತಿಯರು ಸ್ವತಃ ಪಟ್ಟಣಕ್ಕೆ ವಲಸೆ ಬರುತ್ತಿದ್ದಾರೆ. ಅಥವಾ ಅಲ್ಲಿ ಬ್ಯಾಂಕು, ಸರಕಾರಿ ನೌಕರಿ ಮತ್ತು ದೊಡ್ಡ ಕಂಪನಿಗಳಲ್ಲಿರುವವರಿಗೆ ತಮ್ಮನ್ನು ಸೀಮಿತಗೊಳಿಸುತ್ತಿದ್ದಾರೆ. “ನೋಡಿ, ನಾನು ಬಡವನಲ್ಲ, ಅನಕ್ಷರಸ್ಥನೂ ಅಲ್ಲ. ಕಾಲೇಜು ಡಿಗ್ರಿ ಇದೆ. ತಲೆತಲಾಂತರದಿಂದ ನಾವು ಕೃಷಿಕರು. ಅದನ್ನೇ ನಾನೂ ನಡೆಸಿಕೊಂಡು ಬರುತ್ತಿದ್ದೇನೆ. ಆದರೆ ನಾನು ರೈತ, ಹಳ್ಳಿಯಲ್ಲಿ ಇರುತ್ತೇನೆ ಎಂದರೆ ಸಾಕು. ಹುಡುಗಿಯ ಕಡೆಯವರು ಎದ್ದು ಹೋಗುತ್ತಾರೆ. ಒಂದು ಮಾತು ಹೇಳುವ ಸೌಜನ್ಯವನ್ನೂ ತೋರಿಸೋದಿಲ್ಲ” ಎಂದು ಪದವೀಧರರೊಬ್ಬರು ಬೇಸರದಿಂದ ಹೇಳಿದ್ದಾರೆ.

ವಿವಾಹದಲ್ಲಿ ಅನಾಸಕ್ತಿಗೆ ಇನ್ನೂ ಕೆಲವು ಅಂಶಗಳನ್ನು ಸೇರಿಸಬಹುದು. ಮದುವೆಯಾದ ನಂತರವೂ ಹೆಣ್ಣು ಮಗಳು ತನ್ನ ತಂದೆ ತಾಯಿಯರನ್ನು ನೋಡಿಕೊಳ್ಳುವುದು ಈಗ ಸಾಮಾನ್ಯ. ಗಂಡು ಮಕ್ಕಳಿಗಿಂತ ಹೆಚ್ಚಿನ ಮುತುವರ್ಜಿಯನ್ನೂ ಅವರು ತೋರಿಸಬಲ್ಲರು. “ಮುಪ್ಪಿನ ಕಾಲಕ್ಕೆ ಇವನಲ್ಲವೇ ನಮ್ಮನ್ನು ಪೋಷಿಸುವವನು” ಎಂಬ ಭಾವನೆಯಿಂದ ಗಂಡು ಮಕ್ಕಳಿಗೆ ನೀಡುತ್ತಿದ್ದ ಮನ್ನಣೆ ಮುಗಿದಿದೆ. ಆರ್ಥಿಕವಾಗಿ ಸ್ವತಂತ್ರಳಾಗಿರುವ ಮಗಳು ಸಹ ವೃದ್ಧಾಪ್ಯದಲ್ಲಿ ಆಸರೆಯಾಗಿರಲು ಸಾಧ್ಯ ಎಂದು ಮನಗಂಡ ಪೋಷಕರು, ಅವಳನ್ನು ಮದುವೆ ಮಾಡಿ ಕೈ ತೊಳೆದುಕೊಳ್ಳಬೇಕಾದ ಹೊರೆ ಎಂದು ಗಣಿಸುತ್ತಿಲ್ಲ. ಬೇಗ ಮದುವೆಯಾದರೆ ಸಂತೋಷ, ಆಗದಿದ್ದರೆ ಅದೊಂದು ದುರಂತವಲ್ಲ. ಅವಳಿಷ್ಟ ಬಂದಾಗ ಮಾಡಿಕೊಳ್ಳಲಿ. ಎರಡನೆಯದು ಜನಸಂಖ್ಯಾ ಅಸಮತೋಲ. ಕರ್ನಾಟಕದಲ್ಲಿ ಪ್ರತಿ ೧೦೦೦ ಪುರುಷರಿಗೆ ೯೭೩ ಸ್ತ್ರೀಯರಿದ್ದಾರೆ. ಬೆಂಗಳೂರು ನಗರದಲ್ಲಿ ಇದು ಇನ್ನೂ ವಿಷಮ. ಪ್ರತಿ ೧೦೦೦ ಪುರುಷರಿಗೆ ಕೇವಲ ೯೧೬ ಮಹಿಳೆಯರು. ಡಿಮಾಂಡು ಜಾಸ್ತಿಯಾಗುತ್ತಿದ್ದಂತೆ ಸಪ್ಪ್ಲೈ ಕಡಿಮೆಯಾಗಿದೆ.

ಹಳ್ಳಿಗಳಲ್ಲಿ ಆರ್ಥಿಕ ಅನಿಶ್ಚಯತೆ ಹೆಚ್ಚುತ್ತಿರುವುದಕ್ಕೆ ಹವಾಮಾನ ಪಲ್ಲಟದ ಕೊಡುಗೆಯನ್ನೂ ನಾವು ಗಂಭೀರವಾಗಿ ಪರಿಗಣಿಸಬೇಕು. ಭಾರತದ ಬಜೆಟ್‌ ಅಂದರೆ ಮನ್ಸೂನಿನೊಡನೆ ಆಡುವ ಜೂಜು ಎಂದು ಅರ್ಥಶಾಸ್ತ್ರಜ್ಞರು ಪಾಂಡಿತ್ಯಪೂರ್ಣವಾಗಿ ಹೇಳಿಕೆ ಕೊಡುತ್ತಾರೆ. ಆದರೆ ವಿತ್ತಮಂತ್ರಿಗಳು ಜೂಜಿಗೆ ಒಡ್ಡುವುದು ತೆರಿಗೆದಾರರ ಹಣವನ್ನು ತಮ್ಮ ಬ್ಯಾಂಕ್‌ ಖಾತೆಯಿಂದಲ್ಲ. ಸೋತರೆ ಅವರಿಗೆ ವೈಯುಕ್ತಿಕ ನಷ್ಟವಿಲ್ಲ. ಸಣ್ಣ ರೈತರ ಸ್ಥಿತಿ ಹಾಗಲ್ಲ. ವರ್ಷ ವರ್ಷಕ್ಕೆ ಏರುಪೇರಾಗುತ್ತಿರುವ ಹವಾಮಾನ, ಹಲವಾರು ವರ್ಷಗಳ ಅನಾವೃಷ್ಟಿ ಆಮೇಲೆ ಒಂದು ವರ್ಷದ ಜಲಪ್ರಳಯ,  ಅವರ ನಿತ್ಯದ ಬದುಕನ್ನು ಅಸ್ಥಿರಗೊಳಿಸುತ್ತಿವೆ. ಅವುಗಳೊಡನೆ ಏಗುತ್ತಿರುವವನಿಗೆ, ನಿನಗೆ ತಿಂಗಳು ತಿಂಗಳೂ ಪಗಾರವಿಲ್ಲ ಆದ್ದರಿಂದ ಮದುವೆಯಾಗುವ ಯೋಗ್ಯತೆಯಿಲ್ಲ. ಅದರ ಯೋಚನೆಯನ್ನೂ ಮಾಡಬೇಡ ಎಂದು ಹೇಳಿದರೆ ಹೇಗಿರುತ್ತದೆ? 
ತಾರುಣ್ಯದಲ್ಲಿಯೇ ಅನಿವಾರ್ಯವಾಗಿ ಸನ್ಯಾಸಾಶ್ರಮಕ್ಕೆ ದೂಡಲ್ಪಟ್ಟ ಸಹಸ್ರಾರು ಯುವಕರನ್ನು ಅನ್ಯಾಯಕಾರಿ ಬ್ರಹ್ಮನ ಹಾಡು ನೇರವಾಗಿ ತಟ್ಟುತ್ತದೆ. ನಮ್ಮ ದುಃಸ್ಥಿತಿ ದುರ್ಗತಿಗಳಿಗೆ ದೇವರನ್ನು ದೂಷಿಸುವುದು ನಮಗೆ ಯಾವತ್ತೂ ರೂಢಿಯಾಗಿದೆ. ಸುಂದರರನ್ನು ಸನ್ಯಾಸಕ್ಕೆ ತಳ್ಳುವ ಅನ್ಯಾಯಕಾರಿ ಬ್ರಹ್ಮ ನಮ್ಮ ಯುವಕರಿಗೆ ದುರ್ವಿಧಿಯ ಸಂಕೇತವಾಗಿ ದಿಢೀರೆಂದು ಜನಪ್ರಿಯನಾಗಿದ್ದಾನೆ. ಹಾಡಿನ ಸನ್ನಿವೇಶ, ಸೀರೆಯ ಸೆರಗು ಜಾರಿದರೂ ಲೆಕ್ಕಿಸದೇ ಕಾಮಾತುರರಾಗಿ ಹಿಂದೆ ಓಡಿ ಬರುವ ಚಂದುಳ್ಳಿ ಚಲುವೆಯರು ಯುವಕರ ಹತಾಶೆಯನ್ನು ಇನ್ನಷ್ಟು ಕೆರಳಿಸುತ್ತಾರೆ. ನನಗೊಂದು ಕನ್ಯೆ ಹುಡುಕಿಕೊಡಿ ಎಂದು ತಾಲೂಕು ತಹಶೀಲುದಾರರಿಗೆ, ಪೋಲೀಸ್‌ ಕಮೀಶನರರಿಗೆ ಅವಿವಾಹಿತರು ಪತ್ರ ಬರೆಯುವ ವರದಿಗಳನ್ನು ನೋಡಿ ನಮಗೆ ಮೋಜೆನಿಸಬಹುದು. ಆದರೆ ಆ ಮಟ್ಟಕ್ಕೆ ಅವರು ಇಳಿದಿರುವ ಕಾರಣಗಳನ್ನೂ ಸ್ವಲ್ಪ ಯೋಚಿಸಬೇಕು. ಶಿರಸಿಯ ಬಳಿ ೩೬ ವರ್ಷದ ಕೃಷಿಕರೊಬ್ಬರು ಮದುವೆ ಕಾಣದ ನಿರಾಶೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಅವರಿಗೆ ಒಂದು ಕೋಟಿ ಆಸ್ತಿ ಇದ್ದರೂ ಈ ಗತಿ. ಇತ್ತೀಚೆಗೆ ಬ್ಯಾಡಗಿ ತಾಲೂಕಿನ ರೈತರು ಒಟ್ಟಾಗಿ ಕನ್ಯಾ ಭಾಗ್ಯ ಯೋಜನೆಗಾಗಿ ಮುಖ್ಯಮಂತ್ರಿಗಳಿಗೆ ಅರ್ಜಿ ಸಲ್ಲಿಸಿದ್ದಾರೆ. ಹಳ್ಳಿಗರನ್ನು ಮದುವೆಯಾಗುವ ಯುವತಿಯರಿಗೆ ದೊಡ್ಡ ಮೊತ್ತದ ಪ್ರೋತ್ಸಾಹಧನ, ಮಾಸಾಶನಗಳನ್ನು ಘೋಷಿಸಬೇಕೆಂದು ಅಹವಾಲು.

ಅನಿರೀಕ್ಷಿತ ಜನಪ್ರಿಯತೆ
ತಮಗೆ ದಕ್ಕಿರುವ ಅನಿರೀಕ್ಷಿತ ಜನಪ್ರಿಯತೆಗೆ ಮ್ಹಾದೇವಸ್ವಮಿಯವರೂ ಒಗ್ಗಿಕೊಂಡಿದ್ದಾರೆ. ಎಲ್ಲ ಟೀವಿ ಕೇಂದ್ರಗಳಲ್ಲಿ ಅವರ ಸಂದರ್ಶನಗಳು ಪ್ರಸಾರವಾಗಿವೆ. ಹುಡುಗಿಯರು ನನ್ನ ಹಾಡನ್ನು ದುರುಪಯೋಗ ಮಾಡಿಕೊಂಡು ಯುವಕರನ್ನು ಮೂದಲಿಸಬೇಡಿ. ನಮಗೆ ಬ್ಯಾಂಕು ಸರಕಾರಿ ನೌಕರಿಗಳಲ್ಲಿ ಇರುವವರೇ ಬೇಕು ಎಂಬ ಹಟದಲ್ಲಿ, ದುಡಿದು ತಿನ್ನುವ ಹಳ್ಳಿಯ ರೈತರನ್ನು ತಿರಸ್ಕರಿಸಬಾರದು ಎಂದು ಕೈಮುಗಿದು ಕೇಳಿಕೊಂಡಿದ್ದಾರೆ. ಯುವಕರಿಗೂ ಅಷ್ಟೇ. “ನಾನೂ ರೈತ ಕುಟುಂಬದವನು. ಹೊಲದಲ್ಲಿ ಕೆಲಸ ಮಾಡಿದ್ದೇನೆ. ಇವತ್ತೂ ಸರಳ ಜೀವನ ನಡೆಸುತ್ತಿದ್ದೇನೆ. ರಾಗಿ ಮುದ್ದೆ ತಿಂದು ಗಟ್ಟಿಮುಟ್ಟಾಗಿದ್ದೇನೆ. ದುಡಿಯುವುದನ್ನು ಬಿಡಬೇಡಿ. ಒಂದಲ್ಲ ಒಂದು ದಿನ ನಿಮಗೆ ಸೂಕ್ತ ಸಂಗಾತಿಯರು ಸಿಕ್ಕೇ ಸಿಗುತ್ತಾರೆ” ಎಂದು ಸಾಂತ್ವನ ಹೇಳುತ್ತಾರೆ. ಆದರೆ ಬದಲಾದ ವಿವಾಹಾಪೇಕ್ಷೆಗಳ ಸಮಸ್ಯೆ ಯಾವ ಹಾಡಿಗೂ ಮೀರಿದ್ದು. ಈ ಕುರಿತು ಸಾಕಷ್ಟು ಚರ್ಚೆಗಳಾಗಿದ್ದರೂ ಅವಿವಾಹಿತ ಯುವಕರ ಬಗ್ಗೆ ಮಹಿಳೆಯರ ಸಹಾನುಭೂತಿ ಅಷ್ಟಕ್ಕಷ್ಟೇ. “ಇಷ್ಟು ಶತಮಾನಗಳ ಕಾಲ ನಾವು ಹೇಗಿದ್ದೆವೆಂದು ಈಗಲಾದರೂ ಅರ್ಥವಾಯಿತೆ?” ಎಂದು ನೇರವಾಗಿ ಕೇಳದಿದ್ದರೂ ಆ ತಾತ್ಪರ್ಯ ಇದ್ದೇ ಇರುತ್ತದೆ. ಹಿಂದಿನ ತಲೆಮಾರುಗಳ ಅನ್ಯಾಯದ ಲೆಕ್ಕವನ್ನು ಇಂದಿನವರಿಗೆ ಚುಕ್ತಾ ಮಾಡುವುದು ಸಮಾಜದಲ್ಲಿ ಏನನ್ನೂ ಸಾಧಿಸುವುದಿಲ್ಲ. ಪುರುಷರಾಗಲೀ ಸ್ತ್ರೀಯರಾಗಲೀ ಮದುವೆಯಾಗುವುದು ಬಿಡುವುದು ಅವರ ಆಯ್ಕೆಯಾಗಬೇಕು. ಶತಮಾನಗಳುದ್ದಕ್ಕೂ ಪುರುಷರಿಗೆ ಮಾತ್ರ ಅಂಥ ಆಯ್ಕೆ ಇದ್ದು ಅದನ್ನು ಜನ್ಮಸಿದ್ಧ ಹಕ್ಕು ಎನ್ನುವಂತೆ ಪ್ರಯೋಗಿಸುತ್ತಿದ್ದರು. ಆಯ್ಕೆಯಿಂದ ವಂಚಿತರಾಗಿದ್ದ ಮಹಿಳೆಯರು ಅದನ್ನು ಇತ್ತೀಚೆಗೆ ದೊರಕಿಸಿಕೊಂಡು ಚಲಾಯಿಸುತ್ತಿದ್ದಾರೆ. ಅದಕ್ಕೆ ಯಾವ ರೀತಿ ಪ್ರತಿಕ್ರಯಿಸಬೇಕು ಎಂದು ತಿಳಿಯದೇ ಪುರುಷರು ಹೈರಾಣಾಗಿದ್ದಾರೆ.

ಹಿನ್ನಲೆ ಪ್ರಸ್ತಾಪಗಳು
೧. https://youtu.be/g4YSAkRo_Ho

೨. https://youtu.be/fGwP3qtbZC8


anyayakari brahma, arujuna jogi, mhadevswamy